Friday, 14 March 2014

ಹರುಷವು ಹೊರಟು ವರುಷವಾಯ್ತು



ಹರುಷವು
ಹೊರಟು
ವರುಷವಾಯ್ತು
ಅಮ್ಮಾ ....
ನಿನ್ನ ನೆನಪಿನ್ನೂ 
ಹೆರಸಾಗಿಲ್ಲ

ಹೆದ್ದಟ್ಟು ಮೆದುಳಿಗೆ
ಸತ್ಯ ನೀತಿ ಧರ್ಮವ
ತುಂಬಿಸುವ
ಕಡುಗಜಕೆ
ತುಡುವು ಹಿಡಿದು
ಬರಡು ಹೃದಯದಲಿ
ಹಸಿರು ಬೆಳೆಯಲು
ಹೇತುವಾದ
ನಿನ್ನ ನೆನಪು -
ನಗುಮೊಗ
ಮಿಂಚಿ ಮರೆಯಾಗುತಿದೆ
ಪ್ರತಿ ನಿಮಿಷ ...

ಮಗದೊಮ್ಮೆ ಕಾಣೆನೆಂದು
ಖಚಿತವಿದ್ದರೂ
ಕಾಣುವ ಹಂಬಲ .. !!!

(ಹೆರಸಾಗು =ಅಳಿಸಿ ಹೋಗು
ಕಡುಗಜ = ಮಹತ್ಕಾರ್ಯ
ಹೆದ್ದಟ್ಟು = ದಡ್ಡ
ತುಡುವು = ಚುಕ್ಕಾಣಿ
ಹೇತು = ಕಾರಣ )

ಬದುಕು ಬತ್ತುಕಂದಿ ...



ಹೌದು ...
ಈ ಜಗವೇ ಹೀಗೆ
ಹಣವಿದ್ದರೆ
ಜೋತೆಗೂಡುವರು ..

ಹಣವಿಲ್ಲದವ
ಹೆಣ ... ??

ಹೆಣವ ಸುಟ್ಟರೆ
ಹೊಯ್ತು..
ಬೂದಿಯಾಯ್ತು ...

ಆದರೆ

ನವನಿಧಿಯೊಡೆಯ
ದಿವಾಳಿ ಯಾದೊಡೆ
ಬದುಕು
ಬತ್ತುಕಂದಿ ...

ಊರ ಕಟುಕರ
ನಾಲಿಗೆಯ
ಹರಿತಕೆ
ಬದುಕು
ಚಿಂದಿ ಚಿಂದಿ ...

( ಬತ್ತುಕಂದಿ= ಹಾಲು ಬತ್ತಿದ ದನ)

ಚಂದ್ರಜ್ಯೋತಿ...

ಅಮ್ಮಾ ... 
ಇಂದಿನ ಈ 
ಚಂದ್ರಜ್ಯೋತಿಯಲಿ 
ನಗುತಿರುವ 
ಪದ್ಮರಿಪನು 
ಕಂಡಾಗ
ಅನಿಸಿದ್ದು
ಅಂದು ನೀ
ಕೈತುತ್ತು
ಕೊಡುವಾಗ
ತೋರಿಸಿದ
ಚಂದಮಾಮನಿಗಿಂತಲೂ
ಚೆಂದವಿದೆಯೆಂದು ...

ಅಮ್ಮಾ ...
ನೀನಲ್ಲಿ
ನೆಲೆಸಿರುವಿಯಾ .. ???

(ಪದ್ಮರಿಪು =ಚಂದ್ರ
ಚಂದ್ರ ಜ್ಯೋತಿ =ಬೆಳದಿಂಗಳು )

ಇಂದು ತೆರಳಿದ್ದೆ ಆ ಸ್ವರ್ಗಕ್ಕೆ ಕನಸಿನಲಿ .....

ಹಿರಿಯರು ಹೇಳಿದ್ದರು .. 
ನಾನೂ ಓದಿದ್ದೆ 
ಕೇಳಿದ್ದೆ .... 
ಇಲ್ಲಿ ಒಳಿತ ಮಾಡಿದರೆ 
ಅಲ್ಲಿತೆರಳಿದಾಗ 
ನಗು ಮೊಗದಿ
ಸ್ವಾಗತಿಸುವರಂತೆ
ರಂಭೆ
ಊರ್ವಶಿ
ಮೇನಕೆಯವರು

ಇಂದು
ತೆರಳಿದ್ದೆ
ಅಲ್ಲಿಗೆ ಆ ಸ್ವರ್ಗಕ್ಕೆ
ಕನಸಿನಲಿ .....

ಸ್ವರ್ಗದರಮನೆಯಲಿ
ಏನೋ
ನಿರೀಕ್ಷೆಯಿಂದ
ಬಾಗಿಲು ಬಡಿದಾಗ
ಕಂಡಿದ್ದು
ಪರಿಚಿತ ಮುಖ ...

ಸ್ವಾಗತವಿಲ್ಲ
ನಗುಮೊಗವಿಲ್ಲ ..
ಅದೇ
ಸಪ್ಪೆಮೋರೆ ಹಾಕಿ
ಕುಲಿತಿದ್ದಳಲ್ಲಿ
ನನ್ನ
ಮಡದಿ ... !!!

Monday, 3 March 2014

ಹುಚ್ಚು ಮನಸಿನ ವಿರಹಿ ನೆನಪು .... !!!

ನಿನ್ನೊಡನೆ
ಕಳೆದ ದಿನಗಳನು
ಪೊಗಳ್ತಾ
ಬರೆಯೋಣವೆಂದರೆ -
ನಿರ್ವಚನೀಯ 
ಪದಗಳನು
ಕಸಿದು
ವಿರಹದ ಪದಗಳ
ತುರುಕಿ
ಒಳಗೊಳಗೇ
ನಗುತ
ನನ್ನ ಲೇಖನಿಗೆ
ವಿರಾಗಿಯ ವೇಷವ
ಕೊಟ್ಟು
ಅಟ್ಟಹಾಸದಿ
ನಗುತಿದೆ ...

ಹುಚ್ಚು ಮನಸಿನ
ವಿರಹಿ ನೆನಪು .... !!!

(ನಿರ್ವಚನೀಯ = ಹೇಳಲು ಯೋಗ್ಯವಾದ )

ಒಳಗಿರುವ ಮಬ್ಬಿಗ ಮನದ ಕೊಳೆ

ಹೊರಜಗದ 
ಕಣ್ಣಿಗೆ 
ಮಣ್ಣೆರಚಲು 
ಧರಿಸಿದ 
ಮನೀಷಿ 
ವೇಷ ...

ಟೊಪ್ಪಿ
ವಿಭೂತಿ
ಕಿರು ಶಿಲುಬೆ
ಜಪ ಮಾಲೆಗಳು ...

ಒಳಗಿರುವ
ಮಬ್ಬಿಗ ಮನದ
ಕೊಳೆಯನೆನಿತು
ತೊಳೆದೀತು ..???

(ಮನೀಷಿ = ಪಂಡಿತ, ಧಾರ್ಮಿಕ ಮುಖಂಡ
ಮಬ್ಬಿಗ = ರಾಕ್ಷಸ )

ಎಂದಿನಂತಿರಲಿಲ್ಲ ಇಂದೆನ್ನ ನಗುವ ಮನೆ ...

ಎಂದಿನಂತಿರಲಿಲ್ಲ 
ಇಂದೆನ್ನ
ನಗುವ ಮನೆ ... 

ಮುದ್ದು ಕಂದನ 
ತೊದಲು ಮಾತನಾಲಿಸದೆ
ಮನೆ ಮಲಗಿತ್ತು ..

ತೂಗು ತೊಟ್ಟಿಲಲಿ
ಮಗು ನಿದ್ರಿಸುತಿತ್ತು ... !!!

ಕೇಳಿಸುತಿದೆ ಓಂ ನಮಃ ಶಿವಾಯ ....

ಕೇಳಿಸುತಿದೆ 
ಓಂ ನಮಃ ಶಿವಾಯ .... 
ಓಂ ಕಾರ ನಾದ 
ಅಭ್ರಂಕಷದಲಿ ... 

ದರುಶನಕೆಂದು
ನೂಕು ನುಗ್ಗಲು ...
ಅನಶನವನಾಚರಿಸಿ
ಸಾಲಾಗಿ ನಿಂತ
ಭಕುತರ ಮನದಲ್ಲಿ
ಭಯ - ಭಕ್ತಿ

ಪಿನಾಕಿಯ
ಮೇಲಿದೆ
ಅಪ್ರತಿಮ
ಭಕುತಿ ...

ಜೊತೆಗೆ .....

ಜೇಬು, ಆಭರಣ
ಚಪ್ಪಲಿ, ಮೊಬೈಲು ....
ಇವುಗಳು ಕಳೆದು
ಹೋಗುವುದರ
ಭಯ .... !!!!

ಎಲ್ಲವನೂ
ಗಮನಿಸುತಲಿರುವನು
ಪರಮೇಶ್ವರ ... !!!

(ಅನಶನ =ಉಪವಾಸ
ಅಭ್ರಂಕಷ = ಮುಗಿಲು ಮುಟ್ಟುವಂತೆ
ಪಿನಾಕಿ = ಶಿವ )

ದೇಶ ಭಕ್ತಿ...

ಹೌದು 
ಅವನು ದೇಶ ಭಕ್ತಿಯ 
ಕುರಿತು 
ಬರೆವಾಗ 
ಕೆಲವರಿಗೆ 
ಅನುಮಾನ ....

ಕಾರಣವಿಷ್ಟೇ...
ಅವನು
ಮುಸಲ್ಮಾನ ....

ಜನರಿಗರಿವಿರುವುದು
ಅವನ ಹೆಸರು ...
ಮಹಮ್ಮದ ...

ತಿಳಿದಿಲ್ಲ ಅವರಿಗೆ
ಅವನಪ್ಪ
ಗಡಿ ಕಾಯೋ
ಯೋಧ ... !!!

'ಅಮ್ಮ' ಎಂಬ ಆಲದ ಮರ

ನೋವುಂಡ ಮನಕೆ 
ನೆರಳ ಕೊಟ್ಟು 
ಜೋಗುಳ ಹಾಡುತಿದ್ದ 
'ಅಮ್ಮ' ಎಂಬ 
ಆಲದ ಮರ 
ಕೊಡಲಿಯೇಟಿಲ್ಲದೆ
ನೆಲವ ಚುಂಬಿಸಿಯಾಯ್ತು ...

ಮನೆಯಲೊಂದು
ಹೊಸ ಗಿಡವು
ಮಗಳೆಂಬ ಹೆಸರಿನಲಿ
ಚಿಗುರಿ ಬೆಳೆಯುತಲಿದೆ ...

ಪರ್ಯಾಯವಲ್ಲದಿದ್ದರೂ-
ಬೇಗುದಿಯಲಿರಲು
ಮನವ ತಣಿಸುತಲಿದೆ
ಮುಗ್ದ ನಗು-
ತೊದಲು ಮಾತು ... !!!

ಅಮ್ಮನಿರಲಿಲ್ಲ ...

ತವರು ಮನೆಯಲಿ 
ನೋವ 
ತೆರೆದಿಡಲು 
ಬಾಯ್ತೆರೆದಾಗ 
ಅಮ್ಮನಿರಲಿಲ್ಲ ... 

ಅನತಿ ದೂರದಲಿರುವ
ಅಮ್ಮನ ಸಮಾಧಿ
ಮೇಲೆ
ಕೋಗಿಲೆಯೊಂದು
ಮನವ ತಣಿಸಲೆಂಬಂತೆ
ಸುಶ್ರಾವ್ಯದಿ
ಹಾಡುತ್ತಿತ್ತು ... !!!

ಹದಿನಾರರ ಹರೆಯ ...!!!

ಗೆಳತೀ ..... 
ಪಲಿತ ದೇಹಕೆ
ನಿನ್ನ ನೆನಪುಗಳು
ನುಸುಳಿ
ಕಿರಿದಾಗಿಸಿದೆ 
ವಯಸು ...

ಬದಲಾದ
ಮನಸಿಗೀಗ
ಹದಿನಾರರ ಹರೆಯ ...!!!

ಅಂದೊಮ್ಮೆ ನೀನಂದಿದ್ದೆ ....

ಅಂದೊಮ್ಮೆ 
ನೀನಂದಿದ್ದೆ 
ನನ್ನ ಪ್ರೀತಿಯಲಿ 
ಸಿಹಿಯ ಕಾಣುತಿಲ್ಲವೆಂದು 

ಗೆಳತೀ ...
ನೋಡಿಲ್ಲಿ

ನಾ ಉಸಿರಾಡದೆ
ಮಲಗಿರಲು
ಸಿಹಿಯ ಸವಿಯಲು
ನನ್ನ ಮುತ್ತಿರುವುದು
ಎಷ್ಟೊಂದು
ಇರುವೆಗಳು ... !!!

ಅಳುತಿದ್ದ ಉಡಿಕೂಸು ನಕ್ಕಿದ್ದು

ಹಸಿದು 
ಅಳುತಿದ್ದ 
ಉಡಿಕೂಸು 
ಬಾಯಿ ಚಪ್ಪರಿಸಿ
ನಕ್ಕಿದ್ದು 
ಮೊಲೆಹಾಲಿಲ್ಲದ
ಬಡ ತಾಯಿಯ
ಉಪ್ಪು ಕಣ್ಣೀರು
ತುಟಿಯಲಿ
ಬಿದ್ದಾಗ ... !!!

(ಉಡಿಕೂಸು = ಮಡಿಲಲ್ಲಿರುವ ಮಗು)

ಅಂದು ಕಾಣದ ಪ್ರೀತಿ - ಸಾಂತ್ವನ

ಅಂದು 
ಜೊತೆಯಿರಲು 
ಕಾಣದ 
ಪ್ರೀತಿ - ಸಾಂತ್ವನ 
ಇಂದು 
ಹುಲುಸಾಗಿ
ಕಾಣುತಿದೆ ..

ನನ್ನ ಗೋರಿಯ
ಮೇಲೆ
ನೀ ನಿಟ್ಟ
ಸುಮಗಳ
ರಾಶಿಯಲಿ ... !!!

ಸೋಲು ...


ನಗು ಮೊಗದ ಬೆಡಗಿ .. 
ಮೊದಲು 
ಕಂಡಿದ್ದು 
ಮುಗುಳ್ನಗುವಿನೆಡೆ
ಶುಭ್ರ ದಂತ ..
ಪ್ರೇಮ ಚಿಮ್ಮಿದ
ಮೊದಲ
ಹಂತ ...

ಮನವೊಂದು
ಪ್ರೀತಿಯ ಕುಬೇರ ..
ಮುಂಕಿರಿಸುತ
ನಗುವ ಮೋಹಿಸಿತು
ಮರುಳಾಯಿತು
ಕಪಟವನರಿಯದ
ಮೂಕ ...

ಒಳ ಮನಸ
ಕಂಡಿಲ್ಲ ...
ಹುಡುಕಿಲ್ಲ ..
ಕಪಟವನರಿಯಲಿಲ್ಲ ...
ಹಂತ ಹಂತದಲಿ
ಚಿಗುರಿದ
ಕನಸುಗಳು
ಪ್ರೇಮದ ನಗು
ಕೊನೆಗೆ ಧರಿಸಿತು
ಹಂತಕನ ಮುಖವಾಡ .. !!!

ಕಣ್ಣೀರ ತೊರೆ ... !!!

ಅಮ್ಮಾ .... 
ಅತ್ತೂ ಅತ್ತು 
ಬತ್ತಿಲ್ಲ 
ಕಣ್ಣೀರ 
ಕೆರೆ ... 
ನಿನ್ನ ಮೊಗವೆನ್ನ
ಮನದಲಿ
ಮಿನುಗಲು
ಮತ್ತೊಮ್ಮೆ
ಪುಟಿಯುವುದು
ಕಣ್ಣೀರ
ತೊರೆ ... !!!

ಪಯಣದ ಕೊನೆಯ ದಿನದಂದು ...

ಹೌದು ... 
ನನ್ನಮ್ಮ 
ನನಗಾಗಿ 
ಕಾದಿದ್ದಳು 
ಬಾಳ ಪಯಣದ 
ಕೊನೆಯ
ದಿನದಂದು ...

ಸಾವಿರಾರು
ಮೈಲಿ ದೂರದಿಂದ
ತನ್ನ ಮಗನ
ಬರುವಿಕೆಯ
ಕಾದು ..

ಗಂಧ
ಲೋಬಾನಗಳ
ಹೊಗೆಯ ನಡುವೆ
ಶ್ವೇತ ವಸ್ತ್ರವ
ಹೊದ್ದು
ಉಸಿರಾಡದೆ
ಕಣ್ಮುಚ್ಚಿ ಮಲಗಿ ... !!!

ಅಮ್ಮಾ....

ಅಮ್ಮಾ.... 
ಕಾರಿರುಳು 
ನಿನ್ನ ನಗುಮೊಗವೆನ್ನ 
ಮನದೊಲರಳಿ 
ಕನಸಾಗಿ 
ಕಾಡುತಿರಲು
ನಾ ನಗುವೆ
ನಿನ್ನ
ಮಡಿಲಲಿ
ತಲೆಯಿಟ್ಟು ....

ನಗುತ
ಕಣ್ತೆರೆದೊಡೆ
ಕಾರಿರುಳು
ಕಂಬನಿ ...

ಕಣ್ಣೀರನೊರೆಸಲು
ನೀನೆಲ್ಲಿ ... ???

ಅತ್ತೆ- ಮಾವಂದಿರ ಸ್ನೇಹ ಹಿತ ವಚನ- ಬುದ್ದಿ ಮಾತು...

ಅವಳ
ಅತ್ತೆ- ಮಾವಂದಿರ
ಸ್ನೇಹ
ಹಿತ ವಚನ-
ಬುದ್ದಿ ಮಾತು... 
ಇವೆಲ್ಲಾ
ತವರು ಮನೆಯ
ಮನಗಳಿಗೆ
ಕಿವಿಗಳಿಗೆ
ಅಣಕು
ಕುಹಕ
ಕುರೂಪ ... !!!

ಮನಸೊಂದು ಹುಚ್ಚು ಕಲಾವಿದ ....

ಅನುದಿನವು 
ನಿನ್ನ 
ನೆನಪಿನ 
ಕತ್ತಿ
ನನ್ನೆದೆಯ 
ಕುತ್ತುತಿರಲು
ಕನಲದ
ಮನ
ನಗುತ
ಹುಡುಕುವುದು
ತಡಕುವುದು
ವಿರಹದ
ಅಕ್ಷರಗಳನ್ನು ...
..........
ಈ ಮನಸೊಂದು
ಹುಚ್ಚು ಕಲಾವಿದ ....

ಬೆನ್ನಟ್ಟುವುದ ಬಿಟ್ಟಿಲ್ಲ ...

ನೀ ನನ್ನ 
ಬಿಟ್ಟು 
ಹೋಗಿದ್ದರೂ 
ಬೆನ್ನಟ್ಟುವುದ 
ಬಿಟ್ಟಿಲ್ಲ ... 

ನಿನ್ನ
ನೆನಪುಗಳು.

ಮುದ್ದು ಮಗು ಬೆಳೆದರೂ .........

ಮುದ್ದು ಮಗು 
ಬೆಳೆದರೂ 
ಬಿಡಲಿಲ್ಲ 
ಎದೆ ಹಾಲು... 
ಬರವಿಲ್ಲದ 'ತೊರೆ'
ನೋಯುತ್ತಿತ್ತು ...

ಹಸಿದ ಕಂದನ ಕಣ್ಣು
ತಾ ಒಲ್ಲೆ ಎಂದರೂ
ತನ್ನೆದೆಯತ್ತ
ನೋಡುತಿತ್ತು

ಮೊಲೆ ತೊಟ್ಟಿನಲಿ
ಲೇಪಿಸಿದ ಕಹಿಯ
ರುಚಿ ಉಪ್ಪಾಗಿತ್ತು ...

ಹೆತ್ತಬ್ಬೆಯ
ಕಣ್ಣೀರ ಹನಿ
ಕಹಿಯ
ತೊಳೆದಿತ್ತು .... !!!

(ತೊರೆ ಎಂಬುದಕ್ಕೆ "ಎದೆಯಲ್ಲಿ ಹಾಲು ತುಂಬಿ " ಎಂಬ ಅರ್ಥ ವಿದೆ )

ನನ್ನ ಬಿಗಿದಪ್ಪಿಕೋ .....

ನಿನ್ನವಳನು 
ಬರಹದಲಿ 
ಪೊಗಳ್ತಾ 
ನಕೀಬನಂತಾಗದೆ 
ನಕ್ತಭೋಜನವನುಂಡು 
ನನ್ನ
ಬಿಗಿದಪ್ಪಿಕೋ .....
ಎನುತಿರುವಳು
ನನ್ನವಳು

ನನ್ನ
ಅನುದಿನವು
ಮುದ್ದಿಸಿ
ಬಿಗಿದಪ್ಪುವ
ನಿದಿರಾ ದೇವಿ ...

***ಶುಭ ರಾತ್ರಿ ****

(ನಕೀಬ = ಮಹಾರಾಜರ ಹೊಗಳು ಭಟ
ನಕ್ತಭೋಜನ = ರಾತ್ರಿಯ ಊಟ )

feb 14th evening..



"ಸಾಕು
ಹೊತ್ತು ಮುಳುಗುವ
ಹೊತ್ತಾಯ್ತು ...
ಸುಸ್ತಾಯ್ತು ...
ಇನ್ನು 
ಹೃದಯದ
ಮೂಲೆಯಲಿ
ಮಲಗೋಣ ...

ಮಗದೊಮ್ಮೆ
ಹನಿ ಹನಿಯಾಗಿ
ನೆನಪುಗಳ
ಮಳೆಯಾಗಿ ಸುರಿಯೋಣ
ಇವರ ಅಕ್ಷಿಗಳಲೇ .. "

ಎನುತಿದೆ
......................
ಇಂದು ಪಿಸುಗುಟ್ಟಿದ
ಪ್ರೀತಿ -ಪ್ರೇಮದ
ಸವಿಮಾತುಗಳು..

ನೆನಪಿಸುತಿದೆ ನನ್ನ ನಾಸಿಕ ...

ಅಂದೊಮ್ಮೆ 
ನಿನ್ನ 
ಮುದ್ದಿಸುತಿರಲು 
ಸವಿದ 
ಫೇರ್ & ಲವ್ಲಿಯ
ಸುವಾಸನೆಯನು
ಇಂದು
ನೆನಪಿಸುತಿದೆ
ನನ್ನ
ನಾಸಿಕ ... !!!

ಪ್ರೇಮಿಗಳ ಪಿಸುಮಾತುಗಳು ...

ನೆನಪಿನ 
ರಾಶಿಯಿಂದೆದ್ದು 
ಕಣ್ಣನುಜ್ಜುತ 
ಹೊರಜಗತ್ತನು 
ಮೆಲ್ಲಗೆ 
ಇಣುಕಿ ನೋಡಿ
ಅಣಕಿಸಿ
ನಗುತಿವೆಯಿಂದು ...
ಅಂದೆಂದೋ
ಸತ್ತ
ಪ್ರೇಮಿಗಳ ಪಿಸುಮಾತುಗಳು ... !!!

ಗುಲಾಬಿಯ ಕಂಪು ....

ರವಿ ಮೂಡುವ 
ಮೊದಲೇ 
ಎದ್ದ 
ನಿನ್ನ 
ನೆನಪುಗಳಿಗಿಂದು 
ಗುಲಾಬಿಯ 
ಕಂಪು .... !!!!

feb 14

ಪ್ರಿಯೇ ... 
ನನಗರಿವಿದೆ
ವರುಷದಲಿ ಬರುವ 
ಈ 
ದಿನದಲಾದರೂ 
ನೆನಪಿಸುವಿ
ನೀ
ನನ್ನ .....

ಅಷ್ಟೊಂದು
ನೆನಪುಗಳ
ತುಂಬಿರುವೆ
ನಿನ್ನೀ
ಹೃದಯದಲಿ ....

ಕಾಡದಿರು ಕನಸಾಗಿ ..

ಕಾಡದಿರು 
ಕನಸಾಗಿ .. 
ನೋಯಿಸದಿರು 
ನೆನಪಾಗಿ ... 

ನನಗರಿವಿದೆ
ನಾ ನೆನಪಿಸುವ
ಪ್ರೀತಿಯ ಹಸಿರು
ಮರೆಯಾಗಿದೆ ..
ಮಗದೊಮ್ಮೆ
ಚಿಗುರೊಡೆಯದು
ಮನದೊಳಗೆ
ಆ ಪ್ರೀತಿ ...

ಅಂದೆಂದೋ
ಸತ್ತು ನೆಲಕ್ಕುರಿಳಿದ
ಮರವ
ಗೆದ್ದಲು ಮುದ್ದಿಸುತಿವೆ ...

ಇನ್ನು ನೆನೆಪಿನ
ನೀರಿಗೆನಿತು
ಚಿಗುರೀತು ...???

ಫೆಬ್ರುವರಿ ೧೪ ಒಂದು ನೆನಪು (ಹುಚ್ಚು ಭ್ರಮೆ)



ಗೆಳತೀ .... 
ಇಂದಿನ ಈ ದಿನದಲಿ 
ಮನಸು ಓಡುವುದು 
ನಾಗಾಲೋಟದಲಿ
ವರುಷಗಳ ಹಿಂದಿನ
ಈ ದಿನದ
ನೆನಪಿನ ಬಳಿ ...

ಕನಸುಗಳು
ಹುಚ್ಚೆದ್ದು ಕುಣಿದಾಗ
ನಿನ್ನ ಕೆಂಪು ಕೆನ್ನೆಯಲಿ
ತುಟಿಯು ಮೌನದಿ
ಮಾತನಾಡಲು
ನೀ ನಾಚಿ
ಕಾಲ್ಬೆರಳಲಿ
ರಂಗೋಲಿ ಬರೆಯುತಿರಲು
ನನಗನಿಸಿದ್ದು
ಸ್ವರ್ಗಕ್ಕಿರುವುದು
ಮೂರು ಗೇಣು .. ..

ಇಂದು ನೀನೆಲ್ಲಿರುವೆನೆಂದು
ನನಗರಿವಿಲ್ಲದಿದ್ದರೂ
ನನ್ನಂಗಳದಿ ಅರಳಿದ
ಗುಲಾಬಿ ಹೂಗಳು
ನಿನ್ನ ನೆನಪಿಸುತ
ಪ್ರೇಮಗೀತೆ
ಹಾಡುತಿದೆ ...

ಯುಗ ಯುಗಗಳು
ಮೆಲುಕು ಹಾಕಿದರೂ
ಮುಗಿಯದ
ಪ್ರಣಯದ ಅನುಭವಗಳು
ಇಂದಿನ ಈ ದಿನ
ನಿನ್ನ ನೆನಪಿಸಿ
ನಗುತ-ಅಳುತ
ಕನಸುಗಳ ಮರೆಯಲ್ಲಿ
ಶುಭ ಹಾರೈಸುತಿವೆ ...

ಹೂ ಮಾಲೆ ...

ಅಮ್ಮನ 
ಭಾವಚಿತ್ರದ
ಕೆಳಗಿರಿಸಿದ್ದ 
ಹೂ ಮಾಲೆ
ದಿನಕಳೆದರೂ 
ಬಾಡಲಿಲ್ಲ ...

ಕಣ್ಣೀರು
ತಾಕುತಿರಬಹುದೇ ... ??

ಕೆಳಗೊಂದು
ಪುಟ್ಟ
ದೀಪವೂ
ನಂದಿ
ಹೋಗಿತ್ತು .... !!!

ಚಿಗುರುತಿವೆ ಕನಸುಗಳು ....

ಅಂದೊಮ್ಮೆ 
ಪ್ರೀತಿಯ 
ಒರತೆಯ 
ಕೊರತೆಯಿಂದ 
ಬಾಯಾರಿ 
ಸತ್ತ
ಕನಸುಗಳಿಗೆ
ಇಂದಾರೋ
ನೀರೆರೆದಿಹರು ...

ಅನಿಸುತಿದೆನಗೆ ...
ಮನದೊಳಗೆ
ಮೌನದಲಿ
ಚಿಗುರುತಿವೆ
ಕನಸುಗಳು ....

ಕಾಯದಿರು ಕೆಂಗುಲಾಬಿಯೇ ....



ನಿಶೆಯ
ಮಂಜಿನಲಿ ಮಿಂದು
ತನ್ನ ಸೌ೦ದರ್ಯವ
ವೃದ್ಡಿಸಿ
ಅವಳ ಬರುವಿಕೆಗೆ 
ಕಾಯದಿರು
ಕೆಂಗುಲಾಬಿಯೇ ....

ಅವಳ ನಗುಮೊಗವೆನ್ನ
ಮನದಲಿ
ಅಳಿಯದೆ
ಉಳಿದಿರಲು
ನನಗೆಂದೂ
ಪ್ರೇಮಿಗಳ ದಿನ...

ಮೂಢ .. (ನಂಬಿಕೆ)



ತನ್ನ ಹೆತ್ತು 
ಹೊತ್ತು 
ಬೆಳೆಸಿದ 
ಹೆತ್ತಬ್ಬೆಯ
ಆತ್ಮ
ಕೆಲವೊಮ್ಮೆ
ಮಧ್ಯರಾತ್ರಿಯಲಿ
ಅಡಿಗೆಮನೆಗೆ
ನುಗ್ಗಿ
ಶಬ್ಧಮಾಡಿ
ಭಯ
ಪಡಿಸುವುದಂತೆ .... . !!!

ತನ್ನ ಸುಪುತ್ರ
ಇನ್ನೊಬ್ಬರಲಿ
ಇದನು
ಹೇಳುವುದನಾಲಿಸಿ
ಹೆತ್ತಬ್ಬೆಯ
ಆತ್ಮ
ಅಳುತ್ತಿತ್ತು ... !!!!

ಮುರುಕು ದರ್ಪಣ

ಅಂದು
ಅವನನು 
ಅನುದಿನವು 
ನೋಡುತ 
ಚಿಗುರುವ 
ಮೀಸೆಯಲಿ
ಕೈಯ್ಯಾಡಿಸಿ
ನಾ
ನಗುತಿದ್ದೆ ...

ಅವನ ಕೈ ಹಿಡಿದು
ತಿರುಗಿಸುತ -
ತಿರುಗಿಸಿ ನೋಡುತ
ಚಿಗುರುತಿರುವ
ಮೀಸೆಗೆ
ಬಣ್ಣ ಬಳಿಯುತ
ಕೇಳುತಿದ್ದೆ ...
ಹೀಗೇಗೆ
ಕಾಣುವೆನೆಂದು ...

ಇಂದು
ಬಿಳಿ ಮೀಸಿಗೆ
ಕಪ್ಪು ಬಣ್ಣವ
ಬಳಿಯುತಲಿರಲು
ನನ್ನತ್ತ ನೋಡಿ
ನಗುತಿರುವನು ...

ಬಚ್ಚಲ ಕೋಣೆಯ
ಮೂಲೆಯಲಿರುವ .
ಅದೇ....

ಮುರುಕು ದರ್ಪಣ ...!!!

ದರ್ಶನ..



ಗುಡಿಯ ಸೇರಿ
ಕೈ ಮುಗಿಯಲು
ಮೆಟ್ಟಲೇರುತ
ಹೋದವನಿಗೆ
ದರ್ಶನದ 
ಮೊದಲೇ
ತಾ
ಹಾಕುತ ಹೋದ
ಭಿಕ್ಷುಕರ
ತಟ್ಟೆಯಲಿ
ಬಿದ್ದ
ನಾಣ್ಯಗಳ
ಟನ್-ಟನ್
ಶಭ್ದಗಳಲೇ
ಒಡೆಯನ
ದರುಶನವಾದುದರ
ಅರಿವಿರಲಿಲ್ಲ ... !!!

ನಿನ್ನ ನೆನಪುಗಳು ...

ಅನುದಿನವು 
ನನ್ನೆದೆಗೆ 
ನುಸುಳುತಿರುವ 
ನಿನ್ನ 
ನೆನಪುಗಳು 
ಒಬ್ಬಂಟಿಯಾಗಿರಲಿ. ..
ವಿರಹ
ನೋವು
ಹತಾಶೆಯ
ಭಾವವ ಕಳಚಿಟ್ಟು
ಒಬ್ಬಂಟಿಯಾಗಿ
ಬರಲಿ
ನಿನ್ನ ನೆನಪುಗಳು ...

ನನ್ನಮ್ಮ ...


ಮುಸ್ಸಂಜೆಯ
ಪ್ರಾರ್ಥನೆಯ ಬಳಿಕ
ಧ್ಯಾನದಲಿ
ಮಗ್ನಳಾಗಿರುತಿದ್ದ
ನನ್ನಮ್ಮ ... 
ಕೆಲವೊಮ್ಮೆ
ಮಧ್ಯ ರಾತ್ರಿಯ
ವರೆಗೆ ....

ಬಾಯಲಿ
ದೈವ ನಾಮ
ಜಪಿಸುತಲಿರಲು
ಕಯ್ಯಲಿ
ಜಪಮಣಿಗಳ
ನಿಲ್ಲದ ಓಟ ..

ಇಂದು
ಅಮ್ಮನಿಲ್ಲದೆ
ಜಪಮಣಿಗಳು
ವಿಶ್ರಾಂತಿಯಲಿರಬಹುದೆಂದು
ಇಣುಕಿ ನೋಡಿದೊಡೆ
ಕಂಡಿದ್ದು ...

ದೈವ ನಾಮ ಜಪಿಸಲು
ಬಳಸುತಿದ್ದ
ಜಪಮಣಿಗಳು
ನನ್ನಮ್ಮನ
ಹೆಸರನು
ಜಪಿಸುತಲಿದ್ದುವು ... !!!

ಗೆಳೆಯಾ ...



ಗೆಳೆಯಾ ...
ಕೊನೆಗೊಂದು ದಿನ
ನಿನ್ನ ಕನಸುಗಳು
ಬರಿದಾಗುತಿರಲು
ನಿನಗನಿಸಬಹುದು 
ಬದುಕು
ಶೂನ್ಯವೆಂದು ...

ಅಂದು ನಾ
ಬರುವೆನು
ನಿನ್ನ ಹೃದಯಕೆ
ನೆನಪುಗಳಾಗಿ ...
ಬರಿದಾದ
ಹೃದಯದಲಿ
ಮಗದೊಮ್ಮೆ
ಸ್ಪೂರ್ತಿ ತುಂಬಲು ...

ಆದರೆ

ಕನಸುಗಳ-ನೆನಪುಗಳ
ಮರು ಸಂಗಮವ
ಕಾಣಲು
ಭುವಿಯಲ್ಲಿ
ನಾನಿರೆನು ... !!!

ಮಡದಿ ...

ಹಿರಿಯರು ಹೇಳಿದ್ದರು .. 
ನಾನೂ ಓದಿದ್ದೆ 
ಕೇಳಿದ್ದೆ .... 
ಇಲ್ಲಿ ಒಳಿತ ಮಾಡಿದರೆ 
ಅಲ್ಲಿತೆರಳಿದಾಗ 
ನಗು ಮೊಗದಿ 
ಸ್ವಾಗತಿಸುವರಂತೆ 
ರಂಭೆ 
ಊರ್ವಶಿ 
ಮೇನಕೆಯವರು 

ಇಂದು 
ತೆರಳಿದ್ದೆ 
ಅಲ್ಲಿಗೆ ಆ ಸ್ವರ್ಗಕ್ಕೆ 
ಕನಸಿನಲಿ .....

ಸ್ವರ್ಗದರಮನೆಯಲಿ 
ಏನೋ 
ನಿರೀಕ್ಷೆಯಿಂದ 
ಬಾಗಿಲು ಬಡಿದಾಗ 
ಕಂಡಿದ್ದು 
ಪರಿಚಿತ ಮುಖ ... 


ಸ್ವಾಗತವಿಲ್ಲ 
ನಗುಮೊಗವಿಲ್ಲ .. 
ಅದೇ 
ಸಪ್ಪೆಮೋರೆ ಹಾಕಿ 
ಕುಲಿತಿದ್ದಳಲ್ಲಿ 
ನನ್ನ 
ಮಡದಿ ...  !!!