Thursday, 31 October 2013

ಮುದ್ದು ಕಂದ ಮತ್ತು ಅಮ್ಮ

ಹಣಕಾಗಿ ದಿನವೂ 
ಪೀಡಿಸುತಿದ್ದನು ಆ ಮುದ್ದು ಕಂದ 
ಹೆತ್ತಬ್ಬೆಯನು 

ಅಂದೊಂದು ದಿನ 
ಹಣ ಸಿಗದಾಗ ಮಾಡಿದನೊಂದು
ಬೆದರಿಕೆಯ ಹೊಸ ಪ್ರಯೋಗ

ಅಮ್ಮಾ
ಒಂದರಿಂದ ಹತ್ತರ ವರೆಗೆ
ಎಣಿಸುವೆನು ...
ಅದರೊಳಗಿ ಹಣ ಕೊಡದಿರ್ದೊಡೆ
ನಾ ಹಾರುವೆನು ಈ
ಬಾವಿಯೊಳಗೆ ...

ಒಂದು ಎರಡು ಮೂರು ...
ಕೊನೆಗೆ
ಒಂಭತ್ತು ಹತ್ತು ಎಂದು
ಎತ್ತಿ ಹಾಕಿದನೊಂದು ದೈತ್ಯ ಕಲ್ಲನು
ಬಾವಿಯೊಳಗೆ...
ಅವಿತು ಕುಳಿತನು ದೂರದಲಿ

ಶಬ್ದಕೇಳಿ ಓಡಿಬಂದಳಾ
ಸ್ನೇಹ ಮಾತೆ
ಮುದ್ದು ಕಂದಾ ಎನುತ
ಹಾರಿದಳು ...

ಮಿಂಚಿಹೋದ ಕಾಲವ
ಚಿಂತಿಸಿ ಫಲವಿಲ್ಲ ...
ಮುಗ್ದೆ ಅವ್ವನ ದೇಹ
ನೀರಲ್ಲಿ ತೇಲತೊಡಗಿತ್ತು ...

ಅವ್ವನ ಮುಷ್ಟಿಯಲಿ
ನೂರರ ಗರಿ ನೋಟು
ಮುದ್ದು ಕಂದನ ನೋಡಿ
ಕಿಲ ಕಿಲನೆ ನಗುತಿತ್ತು ... 

ಮಾತೃ ಹೃದಯ

ಮಡದಿಯ ಮಾತುಕೇಳಿ 
ಪತಿರಾಯ 
ತನ್ನ ಹೆತ್ತಬ್ಬೆಯ ಕೊಂದು 
ಹೃದಯವ ಕೀಳಿ 
ಮಡದಿಗೆ ಕಾಣಿಕೆ ನೀಡಲು 
ಮನೆಯತ್ತ ನಡೆಯುತಿರಲು
ಎಡವಿ ಬಿದ್ದು ಕಾಲಿಗೆ
ಏಟು ತಗಲಿ
ರಕ್ತ ಸೋರುತಿರಲು ..
ನೊಂದ ಆ
ಮಾತೃ ಹೃದಯ
ಇಂತೆಂದಿತು ...
ತನಯಾ ...
ನೋವುತಿದೆಯಾ ...

Wednesday, 30 October 2013

ನೋವು ಅಂದರೆ

ಗೆಳೆಯನೊಬ್ಬ 
ಕೆಲವೊಂದು 
ಪದಗಳ ಅರ್ಥವನು ಕೇಳಿದ ... 
ಪ್ರೀತಿ 
ವಾತ್ಸಲ್ಯ 
ಮಮತೆ 
ನೋವು ... 
ನಾ ಚುಟುಕಾಗಿ ನುಡಿದೆ .. 
ಪ್ರೀತಿಯೆಂದರೆ  ಅಮ್ಮನ ಮಡಿಲು 
ವಾತ್ಸಲ್ಯವೆಂದರೆ ಅಮ್ಮನ ಅಪ್ಪುಗೆ 
ಮಮತೆಯೆಂದರೆ ಅಮ್ಮನ ಕೈತುತ್ತು 
ಕೊನೆಗೆ ನೋವು .. 
...... 
ನೋವು 
ಅಂದರೆ 
ಕಣ್ಣೀರನೊರಸಿ ನಾನೆಂದೆ 
ಅಮ್ಮನ ಅಗಲಿಕೆ ... 

Tuesday, 29 October 2013

ಅಮ್ಮ

ಅಮ್ಮನ ಅಗಲಿಕೆಯ 
ನೋವಿನಲಾದ 
ಹೃದಯದ ಗಾಯದಲಿ  
ಕೀವು ತುಂಬಿ 
ವೇದನೆ  ಸಹಿಸಲಾಗದ ಮನವು 
ಕಣ್ಣುಗಳಿಗೆ ನೀರ ಸುರಿಸಲು 
ಅನುಮತಿ ಕೊಡಲು 
ಯಾರೋ ಬಂದು 
ಉಳ್ಗೆಯಲಿ 
ತಲೆ ಸವರಿದ ಅನುಭವವಾಗಿ 
ಕಣ್ಣನಗಲಿಸಿ ಒರಸಿ ನೋಡಲು 
ನೋವನ್ನು ಸಿಹಿಯಂತೆ ನುಂಗಿದ 
ನನ್ನಮ್ಮನ ಅಸ್ಪಷ್ಟ ರೂಪು 
ನನ್ನೆದುರಿಗೇ ಕಾಣಿಸತೊಡಗಿತ್ತು ... 

ಉಳ್ಗೆ =ಪ್ರೀತಿ,ಅನುರಾಗ 

Monday, 28 October 2013

***ತಾಯ್ನುಡಿ***



ಜೀವನೋತ್ಸಾಹ
ದಿನದಿಂದ ದಿನಕ್ಕೆ ಕುಂದಿ
ಬೇಳಾಗುತಿರಲು 
ತನಯಾ ..
ನೀ ಚಿಂತಿಸದಿರು
ನನಗಿಲ್ಲಿ ಪರಮಸುಖ
ನೀ ನಿನ್ನ ಜನಕ
ಮಡದಿ ಮಕ್ಕಳನು ಪರಾಮರಿಸು
ನಿರ್ಭೀತನಾಗಿರು
ಪರಾಜಿತನಾಗದಿರು...
ಕನಸಲ್ಲಿ ಬಂದು
ಇಂತೆಂದು ಅರುಹಿ
ನನ್ನೀ ಸ್ನೇಹ ಮಾತೆ
ನಿಮಿಷದಲ್ಲೇ
ಮರೆಯಾದಳು

ಪರಾಮರಿಸು =ಜೋಕೆಯಿಂದ ನೋಡಿಕೊಳ್ಳು
ಬೇಳಾಗು=ಮಂಕಾಗು

Sunday, 27 October 2013

ಪ್ರೇಮ ಕವಿ



ಮುರಿದ ಕನಸುಗಳಿಗೆ 
ಬಣ್ಣ ಬಣ್ಣದ ಬಟ್ಟೆಗಳಿಂದ 
ತೇಪೆ ಹಚ್ಹಿ -
ಕನಸಿನ ಲೋಕದಲಿ
ವಿಹರಿಸುವ
ಪ್ರೇಮಿಗಳಿಗೆ ಉಡಲು ಕೊಟ್ಟು
ಅದರ ಸೌಂದರ್ಯವ
ಕಣ್ತುಂಬ ನೋಡಿ
ಮನಸಾರೆ ಖುಷಿ ಪಡುವವನು

ಯೋಗಿಯಂತೆ ನಟಿಸುವ
ಅರೆ ಹುಚ್ಹ ...

ಕ್ಷಮೆಯಿರಲಿ Ghandhi ತಾತಾ



ವ್ಯಥೆಯ ಕಥೆಯನ್ನು 
ಕವನವಾಗಿಸುವ 
ನನ್ನ ಭಗ್ನ ಲೇಖನಿಗೆ 
ತಮ್ಮನು ಹಾಡಿ ಹೊಗಳಿ
ಅಕ್ಷರಗಳ ಹಾರದೊಂದಿಗೆ
ಶುಭಾಶಯ ಕೋರೋಣವೆಂದರೆ
ಪದಗಳೇ ಸಿಗುತ್ತಿಲ್ಲ ...

ಗಾಂಧಿ ...

ವಿಪರ್ಯಾಸ 

ಗಾಂಧಿ ಎಂದೊಡನೆ 
ನೆನೆವರೆಲ್ಲರು 
ಕೋಲು ಹಿಡಿದು ನಡೆವ 
ಮುದಿ ಜೀವವ
...
ಮುದಿಯಾಗುವ
ಮೊದಲಿದ್ದ ಯವ್ವನದ
ರೂಪವನು
ನೆನೆವರಿಲ್ಲ .....
ಕವಿಯಾಗಿ
ಪ್ರೇಮಿಯಾಗಿ
ಹಸನ್ಮುಖಿಯಾಗಿ
ದುಖಿಯಾಗಿ
ಕೊನೆಗೆ
ಎಲ್ಲ ಬಿಟ್ಟು ಶಾಂತಿಯ
ಹುಡುಕಿ ಹೊರಡುವ ಯೋಗಿಯಾಗಿ
ಬಾಳಿದ ಈ ಮಹಾ ವ್ಯಕ್ತಿತ್ವವ . .

ಜೀವನ ಮಾರ್ಗದಿಂದ
ಭೋದಿಸಿದ ತತ್ವಗಳಿಂದ
ಮಾಡಿದ ಹೋರಾಟಗಳಿಂದ
ಪಟ್ಟ ಯಾತನೆಗಳಿಗಿಂತ
ಹೆಚ್ಹು
ಪ್ರಸಿದ್ದಿ ಪಡೆದುದು
ತನ್ನನು ಅಣಕಿಸುವ
ವ್ಯಂಗ್ಯ ಚಿತ್ರಗಳಿಂದ
ವಿದೂಷಕನಂತೆ
ಹಾಸ್ಯಕಥಾ
ಪಾತ್ರಗಳಿಂದ ..

ಪ್ರಿಯತಮನ ಆಗಮನ ..



ಗಾಳಿಯೇ ನೀ
ಜೋರಾಗಿ ಬೀಸದಿರು
ಮೋಡವೇ ನೀ
ಕಣ್ಣೀರು ಸುರಿಸದಿರು
ಬರುವವನಿದ್ದಾನೆ 
ನನ್ನ ಪ್ರಿಯತಮ
ನನ್ನ ಕಾಣಲು
ಏಳು ಸಾಗರವ
ದಾಟಿ ...

ವಿರಹ ಗೀತೆ...

ಅಂದು 
ದೂರವಾದ 
ಬಣ್ಣ ಬಣ್ಣದ 
ವಸ್ತ್ರ ತೊಟ್ಟು 
ಚೆಲ್ಲಾಟವಾಡುತಿದ್ದ 
ನನ್ನ ನಲ್ಲೆ
ಇಂದು ಬಂದು ಕಾಡುವಳು
ಕಪ್ಪು ಬಿಳುಪಿನ
ಚಿತ್ರಗಳ
ನಾಯಕಿಯ
ವಿರಹ ಗೀತೆಯಲ್ಲಿ

ಆರ್ತ ನಾದ...

ಗೆಳತೀ 
ಅಂದು ನೀ ನಡೆದ ದಾರಿಯಲಿ 
ಇಂದು ಹೆಜ್ಜೆ ಹಾಕಿದ್ದೆ 
ಲಯ ತಪ್ಪದೆ ಕೇಳಿಸುತ್ತಿತ್ತು 
ನಿನ್ನ ಗೆಜ್ಜೆ ನಾದ ... 

ಒಂದರೆ ಘಳಿಗೆ ನಿಂತಿತ್ತು
ಹೃದಯದ ನಾದ
ಸಹನೆಯೂ ಸೋತಿತ್ತು
ಕೇಳಿಸಿದೆ ನಾ ನನ್ನೀ ಹೃದಯದ
ಆರ್ತ ನಾದ

ಅವಧೂತ ..


ಗೆಳತೀ 
ಊರಾಳಿಗಳಿಗೆದರಿ 
ವಿರಹದಲಿ ಮುಳುಗದಿರು 
ಅರಮನೆಯಲಿದ್ದರೂ 
ಬರುವೆ ನಾನಿನ್ನೆಡೆಗೆ 
ಅವಧೂತ ನಾ 
ಭೂಸುತೆಯ ಹುಡುಕಿದ 
ಮಂಗೇಶನಂತೆ 
ನಾ ಬರುವೆ 
ನಿನ್ನ ಇರುವಿಕೆಯ 
ನೆಲವ ಹುಡುಕಿ 
ಬಿಡಿಸಿಕೊಂಡು ಬರುವೆ 
ನನ್ನೀ ಹೃದಯದ 
ಗೂಡೊಳಗೆ 
ಜೋಪಾನದಲಿ ಕೂಡಿಡುವೆ
ಬರಲೇ ನಾ ... ??

ನಿನ್ನ ಅಗಲಿಕೆಯ ಮುನ್ಸೂಚನೆ...

ಪ್ರಿಯೇ 
ಗೆಳೆತನ ಪ್ರೀತಿಯತ್ತ 
ದಾಪುಗಾಲಿಡುವಾಗ 
ಮುಚ್ಹಿದ ಹೃದಯದೊಳಗೆ 
ನನಗರಿಯದಂತೆ 
ಅಂಬೆಗಾಲಿಟ್ಟು ಒಳಬಂದ
ವಿಧಿಯ ಕ್ರೂರ ಮುಖದ
ದರ್ಶನವ ಕಂಡ
ಕಣ್ಣುಗಳು ವಿವರಿಸಲಿಲ್ಲ
ನನ್ನಲ್ಲಿ
ನಿನ್ನ ಅಗಲಿಕೆಯ
ಮುನ್ಸೂಚನೆಯ ....

ಒರಚಲಿಲ್ಲ -ಒದರಲಿಲ್ಲ
ಕಲ್ಲು ಹೃದಯ
ವಿರಕ್ತನಂತೆ
ವಿಧಿಯನ್ನು ನಗು ನಗುತ
ಸ್ವಾಗತಿಸಲು
ಸಜ್ಜಾಗುತಿತ್ತು ..

ಹೃದಯ...

ಗೆಳತೀ 
ನನ್ನೊಳಗೆ ಬಚ್ಚಿಟ್ಟ 
ಸ್ನೇಹದಾ ಗಾತ್ರವನಳೆಯಲು 
ನನ್ನಲ್ಲಿ ಮಾಪಕವಿಲ್ಲ 
ವರ್ಣಿಸಲು ಶಬ್ದಗಳಿಲ್ಲ 
ನಾನೇನ ಮಾಡಲಿ
ಪ್ರಿಯೇ
ನೀ ಹೇಳು
ಪುರಾಣ ಕಥೆಗಳ
ಪ್ರಣಯ ಜೋಡಿಗಳ ಜೊತೆಗೆ
ಉಪಮೇಯವಲ್ಲ
ನವರತ್ನಗಳ ಬೆಲೆಯಂತೆ
ಮೌಲ್ಯವೂ ಸಲ್ಲ
ಹೃದಯದೊಳಗವಿತಿರುವ
ಪುಟ್ಟ ಸ್ನೇಹವ
ನಾ ಹೇಗೆ ಹೊರಗೆ ತೋರಿಸಲಿ
ನೀ ಹೇಳು ಪ್ರಿಯೇ ..

**ನೆನಪು**


ಅಮ್ಮಾ 
ನಾಳೆ ನಮ್ಮ ಬಾಂಧವರಿಗೆ 
ಹಬ್ಬವಂತೆ . 
ಮೊಬೈಲು,
whatsap,
ಫೇಸ್ ಬುಕ್ಕಿನಲಿ
ಕಳುಹುವರು ಸಂದೇಶವನು
ಶುಭಾಶಯಗಳನು
ಹೊಸ ಬಟ್ಟೆ, ಬಿರಿಯಾನಿ, ಐಸ್ ಕ್ರೀಮು
ತಿರುಗಾಟ ಜೂಜಾಟ ಸಿನೆಮಾ ...
ಎಲ್ಲರ ಬಾಯಲೂ ಬಿಸಿ ಬಿಸಿ ಚರ್ಚೆ ...
ನಾಳಿನ ದಿನದಲಿ ಸಂಭ್ರಮಿಸಲು
ಹಲವರಿಗೆ ಹಲವು ಚಿಂತೆ
ಅಮ್ಮಾ ....
ಆದರೆ
ನನ್ನ ಹೃದಯದ ಬೇನೆಯನು ಕಾಣುವವರಿಲ್ಲ ..
ನನ್ನ ಗಾಯದ ನೋವ ಅರಿವವರಿಲ್ಲ
ನಾನಿನ್ನೂ ದುಃಖಿ ..
ನೀನಿಲ್ಲದ ಮೊದಲ ಬಕ್ರೀದ್ ಹಬ್ಬ ...
ನೀನಿಲ್ಲದ ಬಾಳಿನಲಿ
ಶೂನ್ಯದಲಿ ವಿಹರಿಸುವ
ನನಗೆ
ಇನ್ನೆಲ್ಲಿದೆ ಹೇಳು
ಸಂತಸವೆಂಬ ಹಬ್ಬ ..???

ನಿನ್ನ ಬಿಂಬ

ಗೆಳತೀ 
ಅಂದಿನ ಮಧುರ 
ಕ್ಷಣಗಳ ನೆನೆದು 
ಸಂತಸದಿ 
ಉಕ್ಕಿ ಬಂದಿತ್ತು 
ಕಣ್ಣೀರು
...
ಕೆಳಗೆ ಜಾರಿದ
ಕಣ್ಣೀರ ಹನಿಯಲ್ಲಿ
ನಿನ್ನ ಬಿಂಬವು
ನಗುತಿತ್ತು
ನನ್ನ ಅಣಕಿಸಿ ..

ಓ ನೆನಪೇ

ಎಂದೋ ಸತ್ತ
ಕನಸುಗಳು
ಮತ್ತೆ ಚಿಗುರ ತೊಡಗಲು
ನಿನ್ನ ನೆನಪುಗಳು
ಪುನಃ ಕದಕದಿಸಿ 
ಹಿಂಡು ಹಿಚುಕಿ
ಹಿಪ್ಪೆ ಮಾಡುತಿದೆ
ನನ್ನೀ
ತನು ಮನವ. ..
ಓ ನೆನಪೇ
ನೀನೇಕೆ
ಇನ್ನೂ ಕಾಡುತಿರುವೆ ...

ಮುತ್ತಿಟ್ಟ ದಿನಗಳ ನೆನಪು

ಹೊತ್ತು ಮುಳುಗಿದ್ದು 
ಗೊತ್ತೇ ಆಗಲಿಲ್ಲ 
ಮುತ್ತಿಟ್ಟ ದಿನಗಳ ನೆನಪು 
ಹೊತ್ತಿ ಉರಿಯುತಿದೆ 
ಅತ್ತು ಸುಸ್ತಾಯ್ತು 
ಬಿತ್ತರಿಸುತಿದೆ ಮನವು
ನೋವನ್ನು ಅತ್ತು ಅತ್ತು
ಸುತ್ತು ಮುತ್ತಲಿನ ಜನಕೆ
ಒತ್ತಿ ಹೇಳುತಿದೆ
ಪ್ರೀತಿಯೆಂಬ ಕತ್ತಲ ಕೋಣೆಗೆ
ನುಗ್ಗದಿರು ...
ಸಿರಿವಂತ ಚಿತ್ತವನು
ಬೆತ್ತಲಾಗದಂತೆ ಕಾಪಾಡು

ನನ್ನ ಹೃದಯದಲರಳಿದ್ದ ಸುಮಗಳು

ಪ್ರಿಯೇ 
ನನ್ನ ಹೃದಯದಲರಳಿದ್ದ 
ಸುಮಗಳು 
ಬಾಡ ತೊಡಗಿವೆ 
ಒಣಗುತಲಿದೆ 
ತರುಲತೆಗಳು
ನಿನ್ನ ಪ್ರೀತಿಯ
ಮಾತು ಕೇಳಿಸದೆ
ಪರಿತಪಿಸುತಿದೆ....
ಪ್ರಿಯೇ
ಮೌನವ ಮುರಿದು
ಒಂದಿಷ್ಟು ಗುನು ಗುನು
ಮಾತಿನಲಿ ಸ್ನೇಹವ
ಸಿಂಪಡಿಸಿ
ಹೋಗುವೆಯಾ...

ಅನುಮಾನ ..

ಪ್ರಿಯೇ
ಕೋಪಿಸದಿರು ... 
ಹೇಳುವೆನೊಂದು 
ಅನಿಸಿಕೆಯ ... 
ಮದುವೆಯ ಮುನ್ನ 
ನಿನಗೆ 
ಕದ್ದು ಮುಚ್ಚಿ 
ಕೊಟ್ಟ ಮುತ್ತಿನಷ್ಟು 
ಸಿಹಿ 
ಇಂದಿನ 
ಮುತ್ತಿಗೆ ಇಲ್ಲವೋ 
ಎಂಬೊಂದು 
ಚಿಕ್ಕ ಅನುಮಾನ ..

ಮುಗ್ದ ಪ್ರಣಯ ..

ಗೆಳತೀ 
ಎಂದೋ ಬರೆದು 
ಮುಚ್ಚಿಟ್ಟ ಹಾಳೆಯೊಳಗಿತ್ತು 
ನನ್ನ ಪ್ರಣಯ 
ಅಂದು ಹೇಳ ಬಯಸಿ 
ಹೇಳಲಾಗದ
ಮಾತಿನೊಳಡಗಿತ್ತು
ನನ್ನ ಪ್ರಣಯ
ಇಂದು ವಿರಹದಲಿ
ಮಿಂಚಿ ಹೋದ ದಿನಗಳ
ಚಿಂತಿಸಿ ಕೊರಗುತಿದೆ
ಹೃದಯದೊಳಗೆ
ನನ್ನ ಈ ಮುಗ್ದ ಪ್ರಣಯ ...

ವಿಪರ್ಯಾಸ



ಮನುಜನೆಂದರೆ ಹೀಗೆ 
ದೇವನಲ್ಲಿ ಬೇಡುತ್ತಾನೆ 
ಪಡೆಯುತ್ತಾನೆ 
ಪಡೆಯುತ್ತಾನೆ
ಕೊನೆಗೆ ದೇವನನ್ನೇ
ಶಪಿಸುತ್ತಾನೆ

ದೇವನೆಂದರೆ ಹೀಗೆ
ಕೊಡುತ್ತಾನೆ
ಕೊಡುತ್ತಾನೆ
ಕೊನೆಗೆ
ಶಪಿಸಿದವನ
ಕ್ಷಮಿಸುತ್ತಾನೆ ...

ತವಕ

ಅವನಿಯ ಬದುಕಿಗೆ 
ಅಂತ್ಯವಾಡಲಿಲ್ಲ 
ಆದರೂ 
ಅವಳ ಸೇರುವ ತವಕ 
ಅವಾರದಲಿ ಕುಳಿತಿರುವೆ 
ಅಂಬಿಗನ ಕಾದು.....
ಅವನಿಸತೆಯಂತೆ
ಅಪಾರ್ಥಿವದ ಅಂತಃಪುರದಲ್ಲಿ
ಅವಳೆನ್ನ ಕಾದಿಹಳೆಂಬ ಭ್ರಮೆ

(ಅವನಿಸತೆ = ಸೀತೆ
ಅವಾರ=ನದೀದಡ.
ಅಪಾರ್ಥಿವ= ಸ್ವರ್ಗ )

ಯಾರು ದುಃಖಿ ... ??


ವಿರಹ ಗೀತೆಗಳ 
ಅಂತರಾಳವನು 
ಹುಡುಕ ಹೋಗಿ 
ಕೊನೆಗೂ
ಸೋತೆನು

ಇಂದೂ ..
ಅರಿಯೆನು
ಇವರೀರ್ವರಲಿ ಯಾರು ದುಃಖಿ ...
ಕವಿಯೋ
ಕವನವೋ

Saturday, 26 October 2013

ಓ ಮನಸೇ



ಪ್ರಿಯೇ .. 
ನಿನ್ನ ವಿರಹವ ಮರೆಯಲೆಂದು 
ನನ್ನೀ ಮನಸನಿನ್ನೊಂದು 
ಲೋಕದತ್ತ (ವಿಷಯದತ್ತ )
ಕಳುಹಿ ಬಿಟ್ಟಿದ್ದೆ 
ಆದರೆ ....
ಅದು 
ನದಿ 
ಹೊಳೆ 
ಸಾಗರವ ದಾಟಿ 
ವಿಶ್ವ ಪ್ರದಕ್ಷಿಣೆ ಮಾಡಿ 
ಒಂದೆರಡು ನಿಮಿಷದಲಿ 
ಕವಲುದಾರಿಯಲಿ 
ಹಿಂತಿರುಗಿ ಬಂದು 
ಕಿಟುಕಿಯಿಂದ 
ಇಣುಕಿ ನೋಡುತ್ತಿತ್ತು

ಕಾದಿರುವೆ...... ನಿನಗಾಗಿ



ಗೆಳತೀ 
ನಿನ್ನ ಮರೆತಿಹೆನೆಂಬ 
ಅನುಮಾನವಿರದಿರಲಿ 
ನಿನಗಾಗಿ ತೆರೆದಿಟ್ಟ 
ನನ್ನ ಗುಡಿಸಲ ಬಾಗಿಲು 
ತೆರೆದೇ ಇದೆ
ಬಿಸಿಲು ಮಳೆ ಗಾಳಿ ಚಳಿಗಳಿಗಂಜದೆ
ಹಕ್ಕಿಗಣ್ಣನಿಟ್ಟು ಹಜಾರದಲಿ
ನಿನಗಾಗಿ ಕಾದಿರುವೆ
ಹುಚ್ಚು ಮನ ದಿನವೂ ಹೇಳುತಿದೆ
ಬರುವಳಿದ್ದಾಳೆ ನಿನ್ನವಳು
ಎಂದಾದರೊಂದು ದಿನ
ನಿನ್ನ ಹುಡುಕಿ ..

ವರದಕ್ಹ್ಷಣೆ



ಗೆಳೆಯನೊಂದಿಗೆ 
ಯಾರದೋ ಬಿದ್ದಣವನುಣ್ಣಲು 
ಹೋಗಿದ್ದೆ ... 
ಬಿದ್ದವಣದ ರುಚಿಯಲೇನೋ 
ವ್ಯತ್ಯಾಸವ ಕಂಡು 
ಉಣ್ಣದೆ ಹೊರಬಂದೆ
ಗೆಳೆಯನಲಿ ವಿವರಣೆಯ ನೀಡಲು ....
ಮೂಲೆಯಲಿ ಬೀಳುಡಿಗೆ
ತೊಟ್ಟು ಬೂತುಗನಂತಿದ್ದ
ಮುದಿ ಜೀವವ ತೋರಿಸಿ
ಅವನೆಂದ ...
ಆತನ ಮೂರನೇ
ಮತ್ತು ಕೊನೆಯ
ಹೆಣ್ಣು ಮಗಳ ಮದುವೆಯ
ಔತಣವಿದು ..
ನಂದಿನಿಯ ಬಾಳು
ನಂದಾ ದೀಪವಾಗಲು
ಬಯಸಿ ಹರಸಿ
ಮನೆ ಮಠವ ಮಾರಿ
ದೀವಾಳಿಯೆದ್ದವನ
ಬೆವರಿನ- ರಕ್ತದ ವಾಸನೆ
ಹೃದಯದ ನೋವು
ಕಣ್ಣೀರಿನ ಉಪ್ಪು
ಈ ಊಟದಲಿ
ಸೇರಿರಬಹುದು .... ...

(ಬಿದ್ದಣ/ಬಿದ್ದವಣ =ಔತಣ/ಆತಿಥ್ಯ
ಬೀಳುಡಿಗೆ = ಹಳೆಯ ವಸ್ತ್ರ
ಬೂತುಗ = ಲಜ್ಜೆಯಿಲ್ಲದವ /ಭಂಡ /ಹುಚ್ಚ
ನಂದಿನಿ =ಮಗಳು )

ಕೆಂಪು ರಕ್ತ ..



ಅಲ್ಲೊಂದು ಜನ ಸಂದಣಿ
ಬಣ್ಣಗಳ ನಡುವಿನ ಕಿತ್ತಾಟ 
ಕೇಸರಿ-ಪಚ್ಚೆಗಳ ನಡುವೆ ... 
ಅನತಿ ದೂರದಿಂದ 
ಗಮನಿಸಿದೆ ಆ ಗುದ್ದಾಟ 
ಕೊನೆಗೆ ನಾ ಕಂಡೆ
ಸಮಸಂಖ್ಯೆಯ
ಎರಡೂ ಬಣದ
ಎರಡೂ ಬಣ್ಣದ
ಮಲಗಿದ್ದ
ಉಸಿರಿಲ್ಲದ ದೇಹಗಳ ...
ಆದರೆ
ಹರಿಯುತಿತ್ತು ಎಲ್ಲ ದೇಹಗಳಿಂದ
ಒಂದೇ ಬಣ್ಣದ ಆ ಕೆಂಪು ರಕ್ತ ..

ಬತ್ತಳಿಕೆ



ಖಾಲಿಯಾದ 
ಪದಗಳ ಬತ್ತಳಿಕೆಯ
ತುಂಬಿಸಲು
ಆರಂಭಿಸಿದೆ ... 
ಕೈಗೆ ಸಿಕ್ಕ ಕೆಲವೊಂದು 
ಶಬ್ದಗಳ ತುರುಕಿಸಿದೆ ...
ಸರಸ ವಿರಸ
ರಾಮ ಶಬರಿ
ಹೃದಯ ಮನಸು
ಕರುಳು, ಮಾತೆ
ಪ್ರಕೃತಿ, ವಿಕೃತಿ
ಪ್ರೀತಿ ,ಮೌನ
ನೇತ್ರ, ತುಟಿ
ಒಹ್ ...
ಇನ್ನೂ ಇದೆ ..
ಸದ್ಯ ಸಾಕಿಷ್ಟು
ಇನ್ನು ಹೊರಬರಲಿ
ಒಂದರ ಬೆನ್ನಿಗೆ
ಇನ್ನೊಂದರಂತೆ
ಮುತ್ತಿನಂತೆ ಪೋಣಿಸಿದ
ಪದಗಳ ಹಾರವಾಗಿ ...

ಧನ್ಯ ಮಾತೆ ..

ತಾನು 
ಹೆತ್ತ ಮಕ್ಕಳ 
ಮಡಿಲಲ್ಲೇ 
ತಲೆಯಿಟ್ಟು 
ಕೊನೆ ಕಂಡ 
ನನ್ನ ಹೆತ್ತಬ್ಬೆ
ಕೊನೆಯುಸಿರಲ್ಲೂ
ಧನ್ಯತೆಯಿಂದ
ನಕ್ಕಿರಬಹುದು ...
ತಾಯಿ ಮಮತೆಯನು
ಮಕ್ಕಳ ಮಡಿಲಲ್ಲಿ
ಮಲಗಿ ಅನುಭವಿಸಿದಳಾ
ಧನ್ಯ ಮಾತೆ ..

(ನನ್ನಮ್ಮ ಕೊನೆಯುಸಿರೆಳೆದದ್ದು ನನ್ನ ಅಕ್ಕಂದಿರ ತೊಡೆ ಮೇಲೆ ಮಲಗಿ ... ಅದನ್ನು ಇಲ್ಲಿ ಸ್ಮರಿಸಿದ್ದೇನೆ )

ಬಾಟಲಿ



ಚೆಲುವಿಗೊಂದು 
ಮುದ್ದು ಮಗುವಾಯ್ತು 
ಗೆಳತಿಯರೆಲ್ಲಾ 
ಬಂದು ಸೇರಿದರು 
ಹೊಗಳಿದರು 
ಮುದ್ದುಕಂದನ ...

ಚೆಲುವಿಯ ಕಿವಿಯಲೂ
ಊದಿ ತುಂಬಿಸಿದರು
ಪುಕ್ಕಟೆ ಸಲಹೆಗಳ ..

ಎದೆಹಾಲು ಕೊಡಬೇಡ
ಸೌಂದರ್ಯ ಹೋದೀತು
ಚಿಂತಿಸದಿರಲೆಂದು
ಮಗದೊಂದು ಸಲಹೆ
"ಬಾಟಲಿ "

ಕಂದನಿಗೀಗ
ವರುಷ ಹದಿನೆಂಟು
ಚೆಲುವಿಯಮ್ಮನ ಮೇಲಿಲ್ಲ
ಕೊಂಚವೂ ಪ್ರೇತಿ...
ದಿನವೂ ಬೇಕವನಿಗೆ
"ಬಾಟಲಿ"



***ಮಡದಿಯ ತಾಕೀತು***





ವಿರಹದ ಸಾಲುಗಳ 
ಬರೆದು 
ವಿರಹಿಯಾಗಿ 
ವಿರಾಗಿಯಾದರೆ
ನಾನೂ
ನಮ್ಮಿಬ್ಬರ ಮಕ್ಕಳೂ
ವಿಷಪ್ರಾಶನ
ಮಾಡ ಬೇಕಾಗಿ
ಬಂದೀತು
ಜೋಕೆ ..

*** ನಿರೀಕ್ಷೆ ***



ತಿಂಗಳುಗಳ ಹಿಂದೆ 
ತಣ್ಣನೆಯ ರಾತ್ರಿಯಲಿ 
ಸವಿ ಮಾತನಾಡಿ 
ಸವಿ ಕನಸ ಕಂಡು 
ಬೆವತು ಸುಖವ ಪಡೆದ 
ದಿನದ ಫಲಿತಾಂಶ 
ಪ್ರಕಟವಾಗುವ ದಿನವ 
ಕಾಯುತಿರುವಳು 
ನನ್ನವಳು 

ಉಬ್ಬಿದ ಉದರದತ್ತ 
ಕಯ್ಯಿಟ್ಟು ಎಣಿಸುತಿರುವಳು 
ಕೈಬೆರಳಿನಲ್ಲಿ 
ತಿಂಗಳುಗಳನ್ನು

ನೋವಿನಲ್ಲೂ ಸುಖವ 
ಕಾಣುವಳು 
ಹೊಸ ಮಗುವಿನ 
ಹೊಸ ನಗುವಿನ 
ಕನಸ ಕಾಣುತಿಹಳು 



Friday, 25 October 2013

ನೆನಪು




ಪ್ರಿಯೇ 
ನಾವಂದು ಕುಳಿತು 
ಕನಸು ಕಾಣುತಿದ್ದ 
ಆ ಉದ್ಯಾನದ 
ಕಬ್ಬಿಣದ ಆಸನಕ್ಕೀಗ 
ತುಕ್ಕು ಹಿಡಿದಿದೆ
ನಮ್ಮಂತೆ
ನಮ್ಮ ಹೃದಯಗಳಂತೆ
ನಮ್ಮ ಕನಸುಗಳಂತೆ ..

ಕನಸುಗಳಿರಲಿ








ನಶ್ವರ ಬದುಕಿನ 
ಕಷ್ಟ ನಷ್ಟಗಳ 
ಸರಸ ವಿರಸಗಳ 
ಚಿಂತಿಸಿ 
ಕುಳಿತಿರಲು ... 
ಅನತಿ ದೂರದಲ್ಲಿ 
ಊರುಗೋಲಿನೊಂದಿಗೆ 
ಪುಟ್ಟ ಪುಟ್ಟ ಹೆಜ್ಜೆಯನಿಟ್ಟು 


ನಗುತ ನಡೆವ ಆ ಮುದಿಜೀವವ ತೋರಿಸಿ 
ಗೆಳೆಯ ಹೇಳಿದನೊಂದು 
ಮರ್ಮವಚನ ..
ಮಹಾಂತಕನೆಂಬ
ಮಾವುಲಿಗನೊಬ್ಬನ
ಬಲೆಯಲ್ಲಿ ಬಂಧಿಯಾಗುವ
ಸಮಯದಲ್ಲೂ
ಇರಬೇಕು
ಬರೀ ಕನಸುಗಳು ...
ವಿನಾಶಿ ಬದುಕಿನ
ವ್ಯಾಕುಲತೆಗಳಲ್ಲ ..

ಭ್ರಮೆ

ಭ್ರಮೆ 

ಪ್ರಿಯೇ .... 
ನಿನ್ನ ನೆನೆದು 
ಅಪ್ಪಿಕೊಂಡಾಗ ... 
ವರುಷದಿಂದ 
ನೀರು ಕಾಣದ 
ಈ 
ತಲೆದಿಂಬಿಗೂ 
ಬಂತು 
ಮಲ್ಲಿಗೆಯ 
ಸುವಾಸನೆ

ಕೋರಿಕೆ

ಕುರುಡು ಜನಗಳೇ 
ನಾನರಿವೆ...... 
ನಾ ಹೇಳುವುದು 
ಕೇಳಿಸದು ನಿಮಗೆ... 
ಆದರೂ ಹೇಳುವೆನು 
ನಾನೇನೋ ಶ್ವೇತಧಾರಿಯಾಗಿ
ಮಲಗಿಹೆನು .. ...
ಇನ್ನೊಂದೆರಡು ನಿಮಿಷದಲಿ
ಬೂದಿಯಾಗುವೆನು...
ಹೇಳಿರಿ ಎನ್ನವಳಿಗೆ ..
ಕತ್ತಲ ಕೋಣೆಯಲಿರಬೇಡ
ಶ್ವೇತ ವಸ್ತ್ರದಲಿರಬೇಡ ಅನುದಿನ
ಕುಂಕುಮವ ತೊಳೆಯಬೇಡ
ಬಣ್ಣದಬಳೆಯ ಕಳಚಬೇಡ
ಅನುದಿನ ನಗುವ ಮಲ್ಲಿಗೆಯ
ಮುಡಿಯದಿರಬೇಡ ... ....
ನೀವೆನ್ನ ಕಾಣದಿದ್ದರೂ
ನಾನೆಲ್ಲವನೂ ಕಾಣುವೆನು
ನಾ ಕಾಣ ಬಯಸುವುವೆನು
ನಾನಿಲ್ಲದಿದ್ದರೂ
ಮದುಮಗಳಂತೆ ಶೃಂಗರಿಸಿದ
ಮುತ್ತೈದೆಯಾಗಿರುವ
ನನ್ನರಮನೆಯ
ರಾಣಿಯಂತಿರುವವಳನು ..

ಚಂಚಲ ಮನ

ಗೆಳತೀ 
ಚಂಚಲ ಮನವು
ಅತ್ತಿತ್ತ ಓಡುತಿದೆ 
ಬಂಧಿಸಲೊಂದು 
ಜಾಗವನು 
ಹುಡುಕಿ ಹೊರಟಿಹೆನು
ನಿನ್ನ ಹೃದಯದಲೊಂದು
ಪುಟ್ಟ ಜಾಗವಿದ್ದರೆ
ತಿಳಿಸು ನೀ ಬೇಗ
ಆಗಲೇ
ಓಡಿ ಬರುವೆ
ಅಲ್ಲೊಂದು
ಬೀಡಾರ ಹೂಡಿ
ಕೂಡಿಡುವೆ ..

***ವಿರಹ***

***ವಿರಹ*** 

ಗೆಳತೀ 
ನನಗರಿವಿದೆ 
ಬೆಳಕಿರುವ ಕೋಣೆಯಲಿ 
ನಲಿದಾಡುವ ನಿನಗೆ 
ಕಾಣಿಸದು 
ಕತ್ತಲೆಯಲಿ 
ಬಿಕ್ಕುತಿರುವ 
ಎನ್ನ ಮೊಗದ 
ಕಳೆಗುಂದಿದ ರೂಪು  
ಸುರಿಯುವ 
ಕಣ್ಣೀರಿನ ಮಳೆ...

ಮೃದು ಹೃದಯ...

ಗೆಳತೀ 
ನಿನ್ನ ನೆನಪುಗಳು 
ತಿರುಗುತಿದೆನ್ನ 
ದೇಹದಾ ಸುತ್ತ 
ಗಾಣದೆತ್ತಿನಂತೆ.... 
ಅನುದಿನವು ಒತ್ತಿ ಒತ್ತಿ
ಹಿಂಡೆ ಯಂತಾಯ್ತು
ಮೃದು ಹೃದಯ...
ಎಣ್ಣೆ ಯಂತೆ
ಹರಿಯುತಿಹುದೆನ್ನ
ಹೃದಯದಿಂದ
ಕಣ್ಣೀರ ಕೋಡಿ ..

ಹಿಂಡೆ = ಎಣ್ಣೆ ಕಾಳಿನ ಹಿಪ್ಪೆ/ ಸಿಪ್ಪೆ

ಬಾಲ್ಯದ ಗೆಳೆಯರು

ಮರುದಿನದ 
ಶಾಲಾ ಪರೀಕ್ಷೆಯ ಚಿಂತಿಸದೆ 
ಪಾಠಗಳ ಓದದೆ 
ಅವಧಿ ದಿನಗಳಲೂ
ಶಾಲಾ ದಿನಗಳಲೂ 
ಹಗಲಿರುಳೆನ್ನದ
ಮನೆಕಟ್ಟಿ
ಮದುವೆಯ ಆಟವಾಡಿ
ನಕ್ಕು ನಲಿದ
ಗೆಳೆಯರ ಬಳಗದ
ನನಗೂ ಆ ಹೆಣ್ಣು ಮಕ್ಕಳಿಗೂ
ಇಂದು ಹದಿನಾರರ ಹರೆಯ ..
ಅದಕೇ ಎದುರಲಿ ಕಂಡರೂ
ನಾನವರ ಗುರುತಿಸಲಾರೆ ...
ಮೊಗವನ್ನೂ
ಬಣ್ಣದುಡುಪನ್ನೂ
ಮಸಿ ನುಂಗಿದೆ
ನಾ ಗುರುತಿಸದಿದ್ದರೂ
ನನ್ನ ಗುರುತಿಸಿ
ಪರಿಚಯದ ನಗು
ಚೆಲ್ಲುತಿರಬಹುದು
ಪರದೆಯೊಳಗಿಂದ
ನಾ ಕಾಣದಿದ್ದರೂ ..

ಪ್ರಿಯೇ ...

ದಣಿದು ಬಸವಳಿದ ದೇಹ 
ಬಮ್ಮರಿಯ ತೊಡಗಿ 
ನಿದಿರೆಯತ್ತ ವಾಲುತಿರಲು 
ನಿನ್ನ ನೆನಪುಗಳೆನ್ನ 
ಬೆಂದ ಹೃದಯದೊಳಹೊಕ್ಕು 
ಬೆಂಗೋಲು ಚುಚ್ಚಿ
ಬಯಲಾಟ ವಾಡುವುದ
ನಾನ್ಹೇಗೆ ಸಹಿಸಲಿ ಪ್ರಿಯೇ ...