Monday, 5 May 2014

ವಿರಹ ಕವನ ... !!!

ಮನಕೆ
ತಗುಲಿದ ಗಾಯಕೆ
ಅಕ್ಷರಗಳಲಿ
ಸಾಂತ್ವನ
ಹೇಳತೊಡಗಿದೊಡೆ ....
ಅಳುವ ಮನವು
ನಗುತ
ಜನ್ಮ ನೀಡುವ
ಕೂಸು ....
ವಿರಹ ಕವನ ... !!!

ನನ್ನ ಅನುಭವ

ಮುಂದಿನ ವಾರದಿ
ನಡೆವ
ಮೊಮ್ಮಗಳ ಮದುವೆಗೆ
ಸಾಗರವ ದಾಟಿ
ಬರುವನೆನ್ನ
ಕಂದನೆಂದು
ಕಾಯುತಿದ್ದಳೆನ್ನಮ್ಮ
ಕಣ್ಣಿಗೆ ಕಣ್ಣಿಟ್ಟು ...
ತನ್ನ ಕಂದನ ಮೊಗವ
ನೋಡಲಿರುವ
ದಿನಕಿಂತ ಒಂದೆರಡು
ದಿನ ಮೊದಲೇ
ಕರೆದನವನು ...
ತನ್ನೆಡೆಗೆ
ಎನ್ನೊಡೆಯ ...
ಮೈಲುಗಳು
ಹಾರಿ ತನ್ನಮ್ಮನ
ಕಾಣ ಬಂದಾಗ
ಮಲಗಿದ್ದಳೆನ್ನಮ್ಮ ....
ತನ್ನೆರಡು
ಕಣ್ಣುಗಳ ಮುಚ್ಚಿ ....

(ನನ್ನ ಅನುಭವ)

ನಿನ್ನ ಮೊಗವರಿಕೆ ...

ನಿನ್ನ
ನೆನಪೆನ್ನ
ನೆತ್ತಿಯಲಿ
ತೂಗುತಿಹ
ರತ್ನ ಸೂಲು ..
ನಗುವದನದ
ಅನುಪಸ್ತಿತಿಯಲಿ
ಅನುದಿನವು
ಅನುಭವಿಸುವೆ
ನಿನ್ನ
ಮೊಗವರಿಕೆ ... !!!
(ಸೂಲು=ನೆತ್ತಿಯ ಆಭರಣ
ಮೊಗವರಿಕೆ = ಸ್ನೇಹ )

ಸಂಜೆಯ ಕುಳಿರ್ಗಾಳಿಯ ತಂಪು ..

ಸಂಜೆಯ 
ಸೊಬಗ ಸವಿಯಲು 
ನೀರ್ದಾಣ ದಡದಲಿ 
ಕುಳಿತು - 
ಜಲ ಚರಗಳ... 
ಬಕ - ಮರಾಲಗಳ
ಅಲೆದಾಟ
ನಲಿದಾಟ ..
ನೋಡಿ ನಗುತಿರಲು
ನಿನ್ನ ನೆನುಪುಗಳು
ಚಾಮರವಾಗಿ ಬೀಸಿ
ಕುಳಿರ್ಗಾಳಿಯ
ತಂಪು ನೀಡುತ್ತಿತ್ತು ... !!!

ನೀಲಮಣಿ ಬಹುಮಾನ ...



ಗೆಳತೀ ...
ನಿನ್ನ
ನೀಲ ಕಣ್ಣೊಳು
ನನ್ನೆಡೆಗೆ
ಮಿಟಕರಿಸಿ 
ನೋಡುವ
ನೋಟವೊಂದೇ
ಸಾಕೆನಗೆ
ನಾನೆನುವೆ
ಅದೇ ನೀ ಕೊಡುವ
ನೀಲಮಣಿ
ಬಹುಮಾನ ... 
(ನೀಲಮಣಿ =ನೀಲಿ ಬಣ್ಣದ ರತ್ನ )

ಅವಾಂತರ ..

ಅವಳ
ಪುಸ್ತಕದ ಪುಟಗಳೆಡೆಯಲ್ಲಿ
ದೊರೆತ
ನಾ ಬರೆದ ಹಳೆಯ
ಪ್ರೇಮ ಪತ್ರವನೋದಿದಾಗಲೇ 
ತಿಳಿದುದ್ದು
ನಾ ಬರೆದ ಅವಾಂತರ ...
ತೊಂಡೆ ಬೆಂಡೆ
ಬಾಳೆ ದಾಳಿಂಬೆ
ಜಿಂಕೆ ಕಣ್ಣು ...
ಅನುಪಮ ವರ್ಣನೆ . ...
ಇಂದಿನ ಸೌನ್ದರ್ಯ
ಅಂದಿನ ಉಪಮೆ ...
ಅಜಗಜಾಂತರ ... !!!

ಪಾಪಿಯ ದೇಹವ ಅಗ್ನಿಯೂ ಸ್ಪರ್ಶಿಸಲಿಲ್ಲ ... !!!!

ಬಡಜನರ
ಸೂರಿಗೆ ಕೊಳ್ಳಿಯಿಟ್ಟ
ಮತೀಯ ಗಲಭೆಗೆ
ನೇತ್ರತ್ವ ಕೊಟ್ಟ
ಊರ ಜನರ ಶಾಪಕ್ಕೆ 
ಬಲಿಯಾಗಿದ್ದ
ಪಾಪಿ ...
ಕೊನೆಗೊಮ್ಮೆ
ತಾನೂ ಸತ್ತ
ಜೇಬಿನಲೊಂದು
ಚೀಟಿಯ ಬರೆದಿಟ್ಟು ...
'ನನ್ನ ಸಾವಿಗೆ ನಾನೇ ಹೊಣೆ'
ಮಾಂಸಿಕನಂತೆ
ರೈಲುಬಂಡಿಯ ಗಾಲಿಗಳು
ಛಿದ್ರ ಮಾಡಿದ ಮಾಂಸ ತುಂಡುಗಳನು
ಬಕ - ಕಾಕ
ಗಿಡುಗ - ಹದ್ದುಗಳು
ತನ್ನದಾಗಿಸಿತ್ತು ..
ಅಳಿದುಳಿದ ಮಾಂಸ ತುಂಡುಗಳ
ಮೂಟೆಯಲಿ ತುಂಬಿ
ಚಿತೆಗೇರಿಸಿದಾಗ
ವರುಣನ ಆರ್ಭಟ ...
ಅರೆಬೆಂದ ಮಾಂಸ
ಮಗದೊಮ್ಮೆ
ತೋಳ -ನಾಯಿ- ನರಿಗಳ
ಪಾಲು ....
ಪಾಪಿಯ ದೇಹವ
ಅಗ್ನಿಯೂ ಸ್ಪರ್ಶಿಸಲಿಲ್ಲ ... !!!!
(ಇದು ಬರೀ ಭಾವನೆಯಲ್ಲ ..)

ಬಾಲ್ಯ ........



ಬಾಲ್ಯದಲಿ ಶಾಲೆಗೆ
ನಡೆದ ದಾರಿಯಲಿಂದು
ಪುನಃ ಹೆಜ್ಜೆಯನಿಟ್ಟಾಗ ...
ದಾರಿ ನಡುವೆ
ನಾ
ಕಲ್ಲೆಸೆದು ನೋಯಿಸಿದ
ನೆಲ್ಲಿ
ಮಾವು
ಹಲಸಿನ ಮರಗಳ
ಪ್ರೀತಿಯ ನಗು
ಮನಸು -ಹೃದಯವ
ತಣಿಸಿದರೆ ...
ಗೆಳೆಯನ
ಮನೆಯೆದುರಿನ
ಬಾವಿಯ -
'ನೀರ ಸೇದಿ ಕುಡಿದು
ಸೆರಳೆ ನೀಗಿಸಿ
ಒಡಲು ತುಂಬಿ
ಮುನ್ನಡೆ'
ಎಂಬ ಸಾದರದ ನುಡಿ
ಇಂಪಾಗಿ ಕೇಳಿಸುತ್ತಿತ್ತು . ... !!!

ಹುಚ್ಚು ಮನಸು ...

ನನ್ನ
ಕಪ್ಪು ಬಿಳುಪಿನ
ಭಾವನೆಗಳಿಗೆ
ನೀ
ಹಚ್ಚಿದ ಬಣ್ಣವು
ನಿನ್ನ ವಿರಹದ
ಬೇಗೆಯಲಿ
ಮಾಸಿ ಹೋಗುತಿದೆ ...
ಮಗದೊಮ್ಮೆ
ಹೊಸ ಭರವಸೆಗಳ
ಹೊಸ ಕನಸುಗಳ
ಬಣ್ಣ ಹಚ್ಚಲು
ನೀ
ಬರುವಿಯೆಂದು
ಕಾಯುತಿದೆ

ಹುಚ್ಚು ಮನಸು ... !!!

ಮನೆಯಂಗಳದಲಿ ಕಂಪು ಸೂಸುವ ಅರಳಿದ ಸುಮ...

ಮುಸ್ಸಂಜೆ
ಬಾಡುವೆನೆಂದು
ತಿಳಿದೂ
ಮುಂಜಾನೆಯಿಂದ
ನಗುತ
ಮನೆಯಂಗಳದಲಿ
ಕಂಪು ಸೂಸುವ
ಅರಳಿದ ಸುಮದ
ನೋಟದಲಿ ....
ನನ್ನ ಅನುದಿನದ
ಧಾವಂತದ ಓಡಾಟ
ಬೇಸರ
ನೋವು -ಚಿಂತೆ
ತಲ್ಲಣವ
ನೋಡಿ
ಅಣಕಿಸುವ ಭಾವವಿದೆ ... !!!

ಮೊಗವು ಮುಗುಳ್ನಗೆಯ ನಟಿಸುತಿದೆ ...

ನನ್ನ 
ಹೃದಯದೊಳಗಿರುವ 
ನೋವವೃಕ್ಷವು 
ಬಾಡಹೊರಟೊಡೆ 
ನಿನ್ನ ನಗುಮೊಗದ 
ಭಾವವದಕೆ 
ಗೊಬ್ಬರ-
ನೀರ ಸುರಿದು 
ಹಸನಾಗಿಸುತಿದೆ ... 
ಮರು ಘಳಿಗೆಯಲೇ 
ಮೊಗವು 
ಮುಗುಳ್ನಗೆಯ 
ನಟಿಸುತಿದೆ ... !!!

ಕಣ್ಣೀರು ...


ಬಾಲ್ಯದಲಿ
ಬಯಸಿದ್ದು
ಪಡೆಯಲು 
ಬಳಸಿದ್ದ
ಅಸ್ತ್ರ ...
ಅದನೊರಸಿ
ಚಿಂದಿಯಾಗಿತ್ತು
ಅಮ್ಮನ
ಕರವಸ್ತ್ರ .... !!!

ಅಮ್ಮಾ .... ಮನಕೆ ಬಂದಿಲ್ಲ ವಸಂತ ...

ಅಮ್ಮಾ .... 
ವರುಷದ ಹಿಂದೆ 
ನಿನ್ನ ಅಗಲಿಕೆಯ 
ನೋವಿಂದ 
ನನ್ನೀ ಮನದ
ಮರದಿಂದುರುಳಿದ 
ಸಂತಸದ 
ಎಲೆ ಹಣ್ಣು ಕಾಯಿಗಳು ... ...
ಹಲವು ಋತುಗಳುರುಳಿದರೂ 
ಮನಕೆ ಬಂದಿಲ್ಲ 
ವಸಂತ ... 
ಚೈತ್ರದ ಚಿಗುರು ... 
ಸುಶ್ರಾವ್ಯದಿ ಹಾಡಿ 
ಮನವ ತಣಿಸಬಂದಿಲ್ಲ 
ವಸಂತದೂತ .......
ಮನವೆಂಬುದು 
ಹಸಿರ ಉಡುಪು ತೊಟ್ಟ 
ಒಣ ಮರ .... !!!
(ವಸಂತದೂತ = ಕೋಗಿಲೆ)

ಭಯ ...

ನಿನ್ನೆಯ
ಸತ್ತ ಕನಸುಗಳು
ಇಂದೆನ್ನ
ಹೃದಯವ
ಹಿಂಡುತಲಿರಲು ...
ನಾಳೆಯ
ಹೊಸಕನಸ
ಕಾಣಲು
ಭಯ ...!!!!

ಗಾಢ ಕತ್ತಲೆ ... !!!

ಸತ್ತು 
ಮಣ್ಣಾದ 
ಹಿರಿಜೀವಗಳು 
ಕನಸಲಿ ಬಂದು 
ನಕ್ಕು 
ಮಾತುಕತೆ 
ನಡೆಸುವ 
ಹೊತ್ತಿನಲಿ 
ಥಟ್ಟನೆ 
ಎಚ್ಚೆತ್ತು 
ಕಣ್ಣರಳಿಸಿ 
ನೋಡಲು 
ಕಂಡಿದ್ದು ...
ಕೋಣೆಯಲಿ .... 
ಜೊತೆಗೆ 
ಮನಸಿನಲಿ .... 
ಗಾಢ 
ಕತ್ತಲೆ ... !!!

'ಕತ್ತಲೆ' ನನಗಿಷ್ಟ

ಜಗವು ಮಲಗಿರಲು
ಎಚ್ಹೆತ್ತು
ಚಿತ್ತದಲಿ
ನೋವ
ಬೀಜವ
ಬಿತ್ತಿ
ಭಿತ್ತಿಯಲಿ
ಚಿಂತೆಯ
ಚಿತ್ತಾರ
ಬಿಡಿಸಲು
ಶಕ್ತಿನೀಡುವ
'ಕತ್ತಲೆ'
ನನಗಿಷ್ಟ

ಕಣ್ಣೀರ ಸಾಂತ್ವನ ...

ನಿನ್ನ 
ದೃಷ್ಟಿವಿಕ್ಷೇಪಕೆ 
ಸೋತ
ನನ್ನ ಕಣ್ಣುಗಳಿಂದು 
ನಿನಗಾಗಿ 
ದಾರಿಕಾಯುತ
ದೆಸೆಗೆಡುವುದ
ಕಂಡಾಗ
ನೊಂದ ಮನವು
ಕಣ್ಣೀರ ಕಳುಹಿ
ಸಾಂತ್ವನ
ಹೇಳುತಿದೆ ... !!!

ಮನಸು ಇಂದು ಬಿಕ್ಕುತಿದೆ ...



ನೀ
ಚುಚ್ಚಿದ
ಮಾತುಗಳ
ಇರಿತಕ್ಕೆ
ನಲುಗದ 
ಮನಸು
ಇಂದು
ಬಿಕ್ಕುತಿದೆ ...
ನಿನ್ನ
ಮೌನವ ನೋಡುತ... !!!

ನನ್ನ ನೋವ ಆಳವ ನೋಡಿರಬಹುದೇ ನಿನ್ನೊಡಲು .. ??



ಹೌದು ...
ವರುಷಗಳ ನಂತರ
ನೀನಿಂದು
ಸಿಕ್ಕಾಗ
ನಾ ನಕ್ಕಾಗ 
ಅಳುತ್ತಿತ್ತು
ನನ್ನೊಡಲು ...
ವರುಷಗಳ ಹಿಂದಿನ
ನಗುವ ತುಲನೆ ಮಾಡಿ ....
ಗೆಳತೀ ...
ನಿನ್ನ ಕಂಬನಿಯ
ನಾ
ಗಮನಿಸಿದೆ ...
ನನ್ನ ನೋವ ಆಳವ
ನೋಡಿರಬಹುದೇ
ನಿನ್ನೊಡಲು .. ??

ನೆತ್ತರ ಬಿಸಿ ನೆತ್ತಿಯಲಿ ನಲಿವಾಗ ........

ನೆತ್ತರ ಬಿಸಿ
ನೆತ್ತಿಯಲಿ
ನಲಿವಾಗ
ಹೆತ್ತಬ್ಬೆ-ಅಪ್ಪ
ಗುರುಗಳ ಮಾತುಗಳು
ಪೇಲವವಾಗಿ
ಕಂಡವನು
ಕೊನೆಗೊಮ್ಮೆ
ನೆತ್ತರ
ಬಿಸಿಯಾರಿ
ದಿಟವನರಿತು
ಹಿಂತಿರುಗಿ
ನೋಡಿದೊಡೆ
ಕಂಡಿದ್ದು
ಆವನ
ಹಂಗಿಸುತಿರುವ
ಅವನಿಗಿಂತ
ಕಿರಿಯವರು ... !!!
ಅಂದೊಮ್ಮೆ
ಕೇಳಿದ
ಹಿತವಚನಗಳು
ಪೊಂಬೆಟ್ಟದಲಿ ನಿಂತು
ತನ್ನತ್ತ
ಕೈತೋರಿ
ನೋಡಿ ಗಹಗಹಿಸಿ
ನಗುತಿರುವ
ಕನಸುಗಳು ... !!!

ಹೆಸರಲ್ಲೇನಿದೆ .... ???


ಪರೀಕ್ಷೆ ಮುಗಿದಿತ್ತು ..
ಉತ್ತರ ಪತ್ರಿಕೆಯ
ತಿದ್ದಿ ಮರಳಿಸುವ 
ಸಮಯ ....
ಜೀವ ಶಾಸ್ತ್ರದ
ಅಧ್ಯಾಪಕರಿಂದ
ಕೋಪದ ಕೂಗು ...
ಮೋಹನ್ ದಾಸ್ ....
ಕೈ ಚಾಚಿದಾಗ
ದಕ್ಕಿದ್ದು
ಬೆತ್ತದೇಟು ....
ಸೊನ್ನೆ ಅಂಕಕೆ ಸಂದ ಗೌರವ ...
ಇತ್ತ ಮೋಹನದಾಸ
ನೋವಿಗೆ ಅಳುತಿರಲು
ಹಿಂದಿನ ಬೆಂಚಿನಿಂದ
ನಗುವ ಶಬ್ದ ..
ಸೊನ್ನೆ ಅಂಕದ
ಯಥಾರ್ಥ ಒಡೆಯ
ಅವನೂ
ಮೋಹನ ದಾಸ
(ಆಳ್ವ) .... !!!

ಸ್ವಾಗತ ...

ವರುಷಗಳು
ಕಳೆದು
ಊರಿನತ್ತ
ತಿರುಗಿ ಬರುತಿರಲು ..
ದಾರಿಯುದ್ದಕ್ಕೂ
ಊನವಾದ
ಕನಸುಗಳು ...
ನನ್ನ ನೋಡುತ
ಏಳಲಾಗದೆ
ಮಂಡಿಯೂರಿ ,
ಪರಿಚಿತ
ಕಲ್ಲು ಮುಳ್ಳು
ಗಿಡ ಮರಗಳು
ಬಾಲ್ಯದ ಇತಿಹಾಸವ
ಕೆದಕುತಾ .....
ನನ್ನ
ಪರಿಚಿತ ಮೊಗದತ್ತ
ನೋಡಿ ನಗುತಾ
ಸ್ವಾಗತ ಕೋರುತಿತ್ತು ,, !!!

ಮನವು ನೊಂದಿರಲು -

ಮನವು
ನೊಂದಿರಲು -
ಲೇಖನಿಯು
ಅಕ್ಷರಗಳ
ಕೂಡಿಟ್ಟು 
ನಗುತಿತ್ತು ..
ಮಗದೊಮ್ಮೆ
ವಿರಹ ಗೀತೆಯ
ಬರೆವ
ಕನಸ ಕಾಣುತ .. !!!
*ಕಾಮನ್ಸಾರಿ ಮೂಡಂಬೈಲು*

ಅಲ್ಲಿ - ಇಲ್ಲಿ

ಅಲ್ಲಿ
ಸಾಗರದಲಿ
ಮುಳುಗಿದರೆ
ಸಿಗುವುದಂತೆ
ಹವಳ
ಮುತ್ತು ... 
ಇಲ್ಲಿ
ಹೊತ್ತು ಮುಳುಗಿದೊಡೆ
ಅತ್ತು ಕೇಳಿದೊಡೆ
ಮಾತ್ರ
ಸಿಗುವುದು ...
...........
ಅವಳ
ಮುತ್ತು ... 
*ಕಾಮನ್ಸಾರಿ ಮೂಡಂಬೈಲು *

ಮನಸಿನ ಗಾಯ ಇನ್ನೂ ಹಸಿ ಹಸಿ ...

ಗೆಳತೀ .... 
ವರುಷಗಳಿಂದ 
ಮರೆವಿನ 
ಮುಲಾಮು 
ಹಚ್ಹ್ಚುತಲಿದ್ದರೂ 
ನೀ
ಗೀಚಿದ ಮನಸಿನ
ಗಾಯ
ಇನ್ನೂ ಹಸಿ ಹಸಿ ... !!!

ಮೂರು ದಿನದ ಬಾಳಿನಲಿ ..

ಬುದ್ಧಿಯು 
ತುಂಬಿರಬೇಕಾದ 
ಮೆದುಳಲಿ 
ತುರುಕಿಸಿದ 
ಧರ್ಮದ ರವದಿಗೆ 
ಧ್ವೇಷದ ಬೆಂಕಿಯು
ತಗುಲಿ
ಮನುಕುಲದ
ಶಾಂತಿ-ಸಮಾಧಾನ
ಸುಟ್ಟು
ಬೂದಿ ಯಾಗುತಿದೆ

ಮೂರು ದಿನದ
ಬಾಳಿನಲಿ .. !!!!

ಪ್ರಣಯದಿ ಸೋತೆನಗೆ ...

ಪ್ರಣಯದಿ 
ಸೋತೆನಗೆ 
ಜೊತೆಯಾದ 
ಮದ್ಯ.. 
ಬರೆಯಕಲಿಸಿತು 
ವಿರಹದ
ಪದ್ಯ ... !!!

ಹಳ್ಳಿ ಮುದುಕ ...

ಹಳ್ಳಿ ಮುದುಕ ...
ಮಗ ದುಬೈಯಲ್ಲಿ ..
ಮಗನ ಹುಟ್ಟುಹಬ್ಬಕ್ಕೆ
ಹಳ್ಳಿ ಜನ್ರಿಗೆ
ಸಂಭ್ರಮ ... 
ಪಾಯಸ ಮಾಡಿದ್ರು
ಅಪ್ಪ ಅಮ್ಮಂಗೆ
ಬೇಸರ ...
ಮಗನಿಲ್ದೆ ...
ಅಮ್ಮನ್ ಸಲಹೆ
ಮಗನ್ಗೂ ಕಳ್ಸೋಣ ...
ಅಪ್ಪ ಅಮ್ಮ
ಪ್ಯಾಟೆಗ್ ಹೋದ್ರು
ಅಂಚೆ ಕಛೇರಿಲಿ
ಪಾಯ್ಸ ಮಡಿಕೇಲಿ ತುಂಬ್ಸಿ
ದುಬೈ ಅಡ್ರೆಸ್ಸ್ ಕೊಟ್ಟು
ಮಗಂಗೆ ಕಳ್ಸೋಕೆ ಹೇಳಿದ್ರು ..
ಇಂದು ಅಂಚೆ ಕಛೇರಿಲಿ
ಸಂಭ್ರಮ ...
ಎಲ್ರೂ ಪಾಯಸ
ತಿಂದ್ ತೇಗಿದ್ರು ..
ಒಂದ್ವಾರ ಕಳೆದ್ರೂ
ಮಗನ್ಗೆ ಪಾಯಸ
ತಲ್ಪಿಲ್ಲಂತೆ ...
ಅಪ್ಪ ಅಮ್ಮಂಗೆ
ಬೇಜಾರು ..
ಮಗದೊಮ್ಮೆ
ಪ್ಯಾಟೆ ಅಂಚೆ ಕಚೇರೀಲಿ
ವಿಚಾರಿಸಿದಾಗ
ತಿಳಿದ್ಬಂದಿದ್ದು
ಇಷ್ಟು ...
ಇಲ್ಲಿಂದ ಪಾಯಸ
ದುಬೈ ಗೆ ಹೋಗ್ತಿತ್ತು ..
ದುಬೈನಿಂದ ಯಾರೂ
ಕಳ್ಸಿದ ಒನಕೆನೋ
ಅದೇ ದಾರ್ಯಾಗ್
ಬರ್ತಿತ್ತು ..
ಒನಕೆ- ಮಡಿಕೆ
ಮುಖ ಮುಖೀಲಿ
ಮಡಿಕೆ
ಒಡೆದ್ ಹೋಗಿತ್ತು
ಪಾಯಸ
ಚೆಲ್ಲೋಗಿತ್ತು ... !!!
*ಕಾಮನ್ಸಾರಿ ಮೂಡಂಬೈಲು *

ಆ ಅಮ್ಮ ... ಶಬರಿ ..

ಅನುದಿನವೂ
ಕನಸು ಕಾಣುತಲಿದ್ದಳು
ಆ ಅಮ್ಮ ...
ಶಬರಿ ..
ಕೋಪಿಸಿ ಊರುಬಿಟ್ಟ
ಮಗನ
ದಾರಿ ಕಾಯುತ ...
ಕೊನೆಗೂ
ಬಂದ
ಶ್ರೀರಾಮನಂತೆ ...
ಅಮ್ಮ ನಗುತಿದ್ದಳು ...
ಬಿತ್ತಿಯಲಿ
ತೂಗುವ
ಚಿತ್ರದಲಿ ... !!!

ಹರುಷ - ವಿರಸ ...

ಕಾರಣ ...
ಮಡದಿಯ
ಮನದಲಿ
ಹರುಷ .. 
ಪತಿಯು
ಮಾಜಿ
ಪ್ರೇಯಸಿಯೊಂದಿಗೆ
ವಿರಸ ... !!!

ಸಾವಿನ ಕನಸು ನನಸಾಗಿದೆ ...

ಅವಳ ಆತ್ಮವೂ
ನಗುತಿರಬಹುದು
...
ಬಿತ್ತಿಯಲಿ
ತೂಗುವ 
ಭಾವಚಿತ್ರದಲಿ
ಧರಿಸಿರುವ
ಮಾಂಗಲ್ಯ ಸೂತ್ರವ
ಕಂಡು ...
ಮುತ್ತೈದೆ ಸಾವಿನ
ಕನಸು
ನನಸಾಗಿದೆ ... !!!

ಈ ಜಗವೇ ಹೀಗೆ

ಹೌದು ...
ಈ ಜಗವೇ ಹೀಗೆ
ಹಣವಿದ್ದರೆ
ಜೊತೆಗೂಡುವರು ..
ಹಣವಿಲ್ಲದವ
ಹೆಣ ... ??
ಹೆಣವ ಸುಟ್ಟರೆ
ಹೊಯ್ತು..
ಬೂದಿಯಾಯ್ತು ...
ಆದರೆ
ನವನಿಧಿಯೊಡೆಯ
ದಿವಾಳಿಯಾದೊಡೆ
ಬದುಕು
ಬತ್ತುಕಂದಿ ...
ಊರ ಕಟುಕರ
ನಾಲಿಗೆಯ
ಹರಿತಕೆ
ಬದುಕು
ಚಿಂದಿ ಚಿಂದಿ ...
( ಬತ್ತುಕಂದಿ= ಹಾಲು ಬತ್ತಿದ ದನ)